ಬೆಂಗಳೂರು: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಕಲಬುರಗಿಯಲ್ಲಿ ಬೃಹತ್ ಹೋರಾಟಕ್ಕೆ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜನವರಿ 3ರವರೆಗೂ ಕಾಯುತ್ತೇವೆ. ಇಲ್ಲವಾದಲ್ಲಿ ಜನವರಿ 4ರಂದು ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಡೆತ್ ನೋಟ್ ನಲ್ಲಿ ಉಲ್ಲೇಖವಾಗಿರುವ ರಾಜು ಕಪನೂರ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಎಂದರು. ಇದೇ ವೇಳೆ ಪ್ರಿಯಾಂಕ್ ಖರ್ಗೆ ಜೊತೆ ಹೆಜ್ಜೆ ಹಾಕುತ್ತಿರುವ ರಾಜು ಕಪನೂರ್ ಫೋಟೋ ಬಿಡುಗಡೆ ಮಾಡಿದರು. ರಾಜು ಕಪನೂರ್ ಸಚಿವರ ಆಪ್ತ ಎಂಬ ಕಾರಣಕ್ಕೆ ಸಚಿವರು ರಾಜೀನಾಮೆ ಕೊಡಬೇಕು. ಕಲಬುರಗಿ ಹೋರಾಟದ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೂ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ನಿಜವಾಗಿಯೂ ಅಹಿಂದ ನಾಯಕರಾಗಿದ್ದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿ, ಸಚಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಒತ್ತಾಯಿಸಿದರು.