ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲ ತಂದಿದೆ. ಇದೇ ವೇಳೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆದಿದೆ.
2023ರ ಚುನಾವಣೆ ಗೆಲ್ಲುವ ಗುರಿಯೊಂದಿಗೆ ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್ ನೀಡಿ, ವರ್ಚಸ್ಸು ಹೆಚ್ಚಿಸುವ ಹೊಸ ಟೀಂ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಹೈಕಮಾಂಡ್ ಹಂತದಲ್ಲಿಯೇ ತೀರ್ಮಾನ ಕೈಗೊಂಡು ಸ್ಥಳೀಯರ ಗೊಂದಲಕ್ಕೆ ಕಡಿವಾಣ ಹಾಕಲಾಗುವುದು ಎನ್ನಲಾಗಿದೆ.
ಪ್ರಾದೇಶಿಕತೆ, ಜಾತಿವಾರು ಪ್ರಾತಿನಿಧ್ಯ ಪರಿಗಣಿಸಿ ಸಮತೋಲನ ಸಂಪುಟ ರಚನೆ ಮಾಡಲಾಗುತ್ತದೆ. ಸರ್ಕಾರದ ವರ್ಚಸ್ಸು ಹೆಚ್ಚಿಸುವ ಉತ್ಸಾಹಿಗಳಿಗೆ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ವಿಜಯೇಂದ್ರ ಅನೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದಂತಹ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅವರು ಹೋದ ಕಡೆಯಲ್ಲೆಲ್ಲ ಹೆಚ್ಚಿನ ಜನ ಸೇರುತ್ತಾರೆ. ಅವರ ನಾಯಕತ್ವ ಗುಣ ಗುರುತಿಸಿದ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಅವರನ್ನು ನಿರ್ಲಕ್ಷಿಸದೇ ಅವರ ಕುಟುಂಬ ಸದಸ್ಯರಿಗೆ ಮಹತ್ವದ ಜವಾಬ್ದಾರಿ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಂಪುಟ ಪುನಾರಚನೆ ಮಾಡಲಿದ್ದು, ವಿಜಯೇಂದ್ರ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.