ಬೆಂಗಳೂರು: ಮುಡಾ ಅಕ್ರಮ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಭ್ರಷ್ಟಾಚಾರ ಪ್ರಕರಣಗಳನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಎಂ.ಎಲ್.ಸಿ ಸಿ.ಟಿ ರವಿ, ಶಾಸಕರಾದ ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ ವಾಲ್ಮೀಕಿ ನಿಗಮದ ಹಗರಣಕ್ಕಿಂತಲೂ ಮುಡಾ ಹಗರಣ ದೊಡ್ಡದಾಗಿದೆ. 3-4 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ಸಿಎಂ ತವರು ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನಡೆಯಲು ಸಾಧ್ಯವೇ? ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಮತ್ತೊಂದೆಡೆ ಹಗರಣಗಳ ಮೇಲೆ ಹಗರಣಗಳನ್ನು ನಡೆಸುತ್ತಿದೆ. ಮುಡಾ ಅಕ್ರಮವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಿಎಂ ಕಾವೇರಿ ನಿವಾಸಕ್ಕೆ ಬಿಜೆಪಿ ನಯಕರು ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಬಿಜೆಪಿ ನಾಯಕರನ್ನು ತಡೆದ ಪೊಲಿಸರು ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಸುನೀಲ್ ಕುಮಾರ್ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದು, ಬಸ್ ಗಳಲ್ಲಿ ತುಂಬಿ ಕರೆದೊಯ್ದರು.