ಬೆಂಗಳೂರು: ರಹಸ್ಯ ಸಭೆ ಸೇರಿದ್ದ ಬಿಜೆಪಿ ರೆಬಲ್ ನಾಯಕರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆಗೆ ನಿರ್ಧರಿಸಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿ ಕೆಲ ನಾಯಕರು ಯತ್ನಾಳ್ ನೇತೃತ್ವದಲ್ಲಿ ಉತ್ತರ ಕರ್ನಟಕ ಭಾಗದಲ್ಲಿ ಪಾದಯಾತ್ರೆ ಮಾಡುವುದಾಗಿ ಹೇಳುತ್ತಿದ್ದಾರೆ. ಪಾದಯಾತ್ರೆ ಮಾಡುವುದಾದರೆ ಮಾಡಲಿ. ಆದರೆ ಕೆಲ ಕಂಡಿಷನ್ ಇದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು, ಮುನ್ನಡೆಯುವುದು ನನ್ನ ಕರ್ತವ್ಯ, ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಯತ್ನಾಳ್ ಅವರ ಉದ್ದೇಶಿತ ಪಾದಯಾತ್ರೆಗೆ ನಮ್ಮ ತಕರಾರಿಲ್ಲ. ವರಿಷ್ಠರು ಅನುಮತಿ ಕೊಟ್ಟರೆ ಅವರು ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು. ಆದರೆ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಪೂರಕವಾಗಿರಬೇಕು ಎಂದರು.
ಅವರು ವರಿಷ್ಠರನ್ನು ಭೇಟಿಯಾಗಿ ಮಾತನಾಡುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ವರಿಷ್ಠರು ಅನುಮತಿ ಕೊಟ್ಟರೆ ಮಾಡಲಿ. ಅವರು ಏನೇ ಮಾಡಿದರೂ ಪಕ್ಷಕ್ಕೆ ಪೂರಕವಾಗಿರಬೇಕು, ಸಂಘಟನೆಗೆ ಲಾಭವಾಗಿರಬೇಕು ಎಂಬ ಸದುದ್ದೇಶವಿರಲಿ ಎಂದು ಮಾತ್ರ ನಾನು ಹೇಳುತ್ತೇನೆ ಎಂದಿದ್ದಾರೆ.