ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಸ್ವರಪ್ಪ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ವಾಕ್ಪ್ರಹಾರಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ರಾಘವೇಂದ್ರ, ನಾನು ಈಶ್ವರಪ್ಪನವರ ಬಗ್ಗೆ ಮಾತನಾಡುವುದು ಬೇಡ ಎಂದುಕೊಂಡಿದ್ದೆ. ಆದರೆ ಈಗ ಮಾತನಾಡುವುದು ಅನಿವಾರ್ಯವಾಗಿದೆ. ಅನಗತ್ಯವಾಗಿ ಯಡಿಯೂರಪ್ಪ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಎಸ್ ವೈ ಹಲವು ಸವಾಲು, ಹೋರಾಟಗಳಿಂದ ಬಂದವರು ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಪಾಪ….15 ದಿನಗಳಿಂದ ಈ ರೀತಿ ಅನಿಸಿದೆ. ಮೊದಲು ಹೀಗೆ ಅನಿಸಿರಲಿಲ್ಲ ಅವರಿಗೆ. ಪುತ್ರ ಕಾಂತೇಶ್ ಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಕೆ.ಇ.ಕಾಂತೇಶ್ ಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ತೀರ್ಮನವನ್ನು ಈಶ್ವರಪ್ಪ ಗೌರವಿಸಬೇಕಿತ್ತು ಎಂದು ತಿರಿಗೇಟು ನೀಡಿದ್ದಾರೆ.
ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಈಶ್ವರಪ್ಪ ಏನೇ ಮಾತನಾಡಿದರೂ ಆಶಿರ್ವಾದ ಅಂದುಕೊಳ್ಳುತ್ತೇನೆ. ಜನರು ಮತದಾನದ ಮೂಲಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.