ಹಾಂಗ್ ಕಾಂಗ್‌ನಲ್ಲಿ 37 ವರ್ಷದ ವ್ಯಕ್ತಿಗೆ ಕಾಡಿನ ಮಂಗವೊಂದು ಕಚ್ಚಿದೆ. ಈತ ಅಪರೂಪದ ವೈರಸ್ ಸೋಂಕಿಗೆ ಒಳಗಾಗಿದ್ದಾನೆ. ಸದ್ಯ ಕೋತಿಯಿಂದ ಕಚ್ಚಿಸಿಕೊಂಡಿರೋ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ದಾಖಲಾಗಿದ್ದಾನೆ. ಈ ಮೂಲಕ ಹಾಂಗ್ ಕಾಂಗ್‌ನಲ್ಲಿ ಬಿ-ವೈರಸ್‌ನ ಮೊದಲ ಪ್ರಕರಣ ವರದಿಯಾಗಿದೆ.
1932 ರಿಂದೀಚೆಗೆ ಇಂತಹ 50 ಪ್ರಕರಣಗಳು ವರದಿಯಾಗಿವೆ. ಈ ವೈರಸ್ ಸೋಂಕಿಗೆ ಒಳಗಾದ ಮೊದಲ ವ್ಯಕ್ತಿಯೆಂದರೆ ಯುವ ವೈದ್ಯ ವಿಲಿಯಂ ಬ್ರೆಬ್ನರ್. ಪೋಲಿಯೊ ವೈರಸ್ ಕುರಿತು ಸಂಶೋಧನೆ ನಡೆಸುತ್ತಿದ್ದಾಗ ಅವರಿಗೆ ರೀಸಸ್ ಮಂಗವೊಂದು ಕಚ್ಚಿತ್ತು. ಗಾಯ ವಾಸಿಯಾಗಿದ್ದರೂ ನಂತರ ಅವರು ತೀವ್ರವಾದ ನರವೈಜ್ಞಾನಿಕ ಕಾಯಿಲೆಯನ್ನು ಎದುರಿಸಬೇಕಾಯಿತು. ಇದರಿಂದ ಉಸಿರಾಟದ ವೈಫಲ್ಯವುಂಟಾಗಿ ಅವರು 1932 ರಲ್ಲಿ ನಿಧನರಾದರು.
ಬಿ-ವೈರಸ್ ಎಂದರೇನು?
ಬಿ-ವೈರಸ್ ಒಂದು ರೀತಿಯ ಹರ್ಪಿಸ್ ವೈರಸ್, ಇದು ಮುಖ್ಯವಾಗಿ ರೀಸಸ್ ಕೋತಿಗಳಲ್ಲಿ ಕಂಡುಬರುತ್ತದೆ. ಇದನ್ನು ಹರ್ಪಿಸ್ ಬಿ ವೈರಸ್ ಅಥವಾ ಮಕಾಕಾ ಹರ್ಪಿಸ್‌ವೈರಸ್ 1 (McHV-1) ಎಂದೂ ಕರೆಯಲಾಗುತ್ತದೆ. ಈ ವೈರಸ್ ಸಾಮಾನ್ಯವಾಗಿ ಮಂಗಗಳಲ್ಲಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದರೆ ಕಚ್ಚುವಿಕೆ, ಗೀರುಗಳು ಅಥವಾ ಸೋಂಕಿತ ದೈಹಿಕ ದ್ರವಗಳ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದು ಮೆದುಳಿನ ಉರಿಯೂತ ಸೇರಿದಂತೆ ಗಂಭೀರವಾದ ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಬಿ-ವೈರಸ್ ಸೋಂಕು ಮಾರಣಾಂತಿಕವೇ ?
ಮಾನವರಲ್ಲಿ ಬಿ-ವೈರಸ್ ಸೋಂಕು ಅಪರೂಪ, ಆದರೆ ಇದು ಮಾರಣಾಂತಿಕವಾಗಬಹುದು. ಇದರ ಲಕ್ಷಣಗಳೆಂದರೆ ಜ್ವರ ಮತ್ತು ತಲೆನೋವು. ನರವೈಜ್ಞಾನಿಕ ಸಮಸ್ಯೆಗಳು ಮತ್ತು ಸಾವಿಗೂ ಇದು ಕಾರಣವಾಗುತ್ತದೆ. ಅಮೆರಿಕದಲ್ಲಿ ದಾಖಲಾದ 50 ಪ್ರಕರಣಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ವ್ಯಕ್ತಿಯು ಬಿ-ವೈರಸ್ ಸಂಪರ್ಕಕ್ಕೆ ಬಂದರೆ ತಕ್ಷಣವೇ ಎಂಟಿವೈರಲ್ ಔಷಧಿಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸುವುದು ಬಹಳ ಮುಖ್ಯ. ಹೆಚ್ಚುವರಿಯಾಗಿ ಮಕಾಕ್ ಮಂಗಗಳೊಂದಿಗೆ ಕೆಲಸ ಮಾಡುವ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಮನುಷ್ಯರಲ್ಲಿ ಈ ವೈರಸ್ ಹರಡುವುದು ಬಹಳ ಅಪರೂಪ. ಸೋಂಕಿತ ವ್ಯಕ್ತಿಯ ಗಾಯದ ನೇರ ಸಂಪರ್ಕದಿಂದಾಗಿ ಅವರ ಪತ್ನಿ ಕೂಡ ಈ ವೈರಸ್‌ಗೆ ತುತ್ತಾಗಿದ್ದಾರೆ. ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ವೈರಸ್‌ಗೆ ಒಡ್ಡಿಕೊಂಡ ಒಂದು ತಿಂಗಳೊಳಗೆ ಕಾಣಿಸಿಕೊಳ್ಳುತ್ತವೆ. ಆದಾಗ್ಯೂ ಕೆಲವೊಮ್ಮೆ ಈ ಅವಧಿಯು 3-7 ದಿನಗಳಾಗಿರಬಹುದು. ಸೋಂಕಿನ ಸಮಯದಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ಸ್ನಾಯು ನೋವು, ಮಂಗ ಕಚ್ಚಿದ ಜಾಗದಲ್ಲಿ ನೋವು, ಮರಗಟ್ಟುವಿಕೆ, ತುರಿಕೆ. ಇದಲ್ಲದೆ ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವು ಸಹ ಬರಬಹುದು.