
ಧಾರವಾಡ: ತಂತ್ರಜ್ಞಾನ ಬಳಸಿಕೊಂಡು ಗುಣಾತ್ಮಕ ಮಾನದಂಡಗಳ ಮೂಲಕ ಮಾನವರಹಿತ ಪರೀಕ್ಷೆ ನಡೆಸುವ ಸ್ವಯಂಚಾಲಿತ ಚಾಲನಾ ಪರೀಕ್ಷಾಪಥ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಠ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಧಾರವಾಡ ಪಶ್ಚಿಮ ಸಾರಿಗೆ ಕಚೇರಿಯು ರಾಯಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ, ವಾಹನಾ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್‌ಗಳನ್ನು ಬದಲಾಯಿಸಿ ವಿದ್ಯುತ್ ಚಾಲಿತ ಹಾಗೂ ಸಿಎನ್‌ಜಿ ಇಂಧನದ ವಾಹನಗಳನ್ನು ಬಳಕೆಗೆ ತರಲು ಚಿಂತನೆ ನಡೆದಿದೆ ಎಂದರು.
ಗುಣಮಟ್ಟದ ಚಾಲನಾ ಪರೀಕ್ಷೆಗೆ ಈ ಕೇಂದ್ರಗಳು ಅಗತ್ಯವಾಗಿವೆ. ರಾಜ್ಯದೆಲ್ಲೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸುಮಾರು 30 ರಿಂದ 35 ಮಾನದಂಡಗಳ ಮೂಲಕ ತಂತ್ರಜ್ಞಾನ ಆಧರಿಸಿ ಮಾನವ ರಹಿತವಾಗಿ ಚಾಲನಾ ಪರೀಕ್ಷೆಗಳು ನಡೆಯಲಿವೆ. ವಾಹನಗಳ ಫಿಟ್ ನೆಸ್ ಪರೀಕ್ಷೆಯಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರಿಗೆ ಇಲಾಖೆಯ ಸುಧಾರಣೆ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾರಿಗೆ ಸಂಸ್ಥೆಯ ನೌಕರರ ವೇತನ ಪಾವತಿಗೆ 2500 ಕೋಟಿ ರೂ.ನೀಡಿದ್ದಾರೆ. ಮುಷ್ಕರದಲ್ಲಿ ಭಾಗವಹಿಸಿ ವಜಾಗೊಂಡಿದ್ದ ನೌಕರರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲಾಗುತ್ತಿದೆ. ಹಳೆಯ ಬಸ್‌ಗಳನ್ನು ಬದಲಿಸಿ ವಿದ್ಯುಚ್ಛಕ್ತಿ ಚಾಲಿತ ಹಾಗೂ ಸಿಎನ್‌ಜಿ (Compressed Natural Gas) ಆಧಾರಿತ ಬಸ್‌ಗಳನ್ನು ಖರೀದಿಸಿ ಬಳಸಲು ಕೇಂದ್ರ ಸರ್ಕಾರ ಸಲಹೆ ನೀಡಿದೆ, ರಾಜ್ಯದಲ್ಲಿಯೂ ಮುಂಬರುವ ದಿನಗಳಲ್ಲಿ ಈ ವಾಹನಗಳು ಬಳಕೆಗೆ ಬರಲಿವೆ ಎಂದು ಹೇಳಿದ್ದಾರೆ.
ಶಾಸಕ ಅರವಿಂದ ಬೆಲ್ಲದ, ವಾಕರಸಾಸಂ ಅಧ್ಯಕ್ಷ ವಿ.ಎಸ್. ಪಾಟೀಲ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರಾಸಾಸಂ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಉತ್ತರ ಪ್ರವರ್ತನ ವಿಭಾಗದ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶಂಕ್ರಪ್ಪ, ವಾಕರಸಾಸಂ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಆರ್.ರಾಮನಗೌಡರ್ ಮತ್ತಿತರರು ಉಪಸ್ಥಿತರಿದ್ದರು.
ಅನಿಲ ಮೇತ್ರಿ ಮತ್ತು ಅನುರಾಗ ಸಾಂಸ್ಕೃತಿಕ ಬಳಗದ ಕಲಾವಿದರು ಪ್ರಾರ್ಥಿಸಿದರು. ದಿನಮಣಿ ಕಾರ್ಯಕ್ರಮ ನಿರೂಪಿಸಿದರು.