ಬಳ್ಳಾರಿ: ಎಲೆಕ್ಟ್ರಿಕ್ ಬಸ್‍ಗಳಿಗೆ ಚಾಲಕರ ಕೊರತೆಯಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿರುವ ಚಾಲಕರನ್ನು ಒಂದು ವರ್ಷದ ಅವಧಿಗೆ ವೈದ್ಯಕೀಯ ತಪಾಸಣೆ ಫಿಟ್ನೆಸ್ ರಿಪೋರ್ಟ್ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿಯಿಂದ ಹೊಸಪೇಟೆ ಹಾಗೂ ಬಳ್ಳಾರಿಯಿಂದ ಕಂಪ್ಲಿಗೆ ತಡೆರಹಿತ ಬಸ್‍ಗಳಿಗೆ ಅವರು ನಗರದ ಬಸ್ ಡಿಪೋ-3ರಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಇದೇ ಆ.15ರಂದು ಸುಮಾರು 600 ಹೊಸ ಎಲೆಕ್ಟ್ರಿಕ್ ಬಸ್‍ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಹಾಗೂ ಡಿಸೇಲ್ ಇಂಧನ ಬಸ್‍ಗಳನ್ನು ಖರೀದಿಸಲಾಗುವುದು ಮತ್ತು ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸುಮಾರು 45 ಸಾವಿರ ಬಸ್‍ಗಳ ಮೇಲೆ ಅಜಾದಿ ಕಾ ಅಮೃತ್ ಮಹೋತ್ಸವ ಸ್ಟೀಕರ್‍ಗಳನ್ನು ಅಂಟಿಸಲಾಗುತ್ತಿದೆ ಎಂದು ತಿಳಿಸಿದರು.
ಬಳ್ಳಾರಿ ಕೆಕೆಆರ್‍ಟಿಸಿ ವಿಭಾಗದ ಬಹುದಿನಗಳ ಬೇಡಿಕೆ ಅನುಸಾರ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ನೌಕರರಿಗಾಗಿಯೇ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ ಭೂಮಿಪೂಜೆ ಕಾರ್ಯವನ್ನು ನೆರವೇರಿಸಲಾಗುವುದು ಎಂದರು.
ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಹಳೆ ಬಸ್‍ಗಳಿದ್ದು, ಅವುಗಳ ಬದಲಾವಣೆಗೆ(ಇಂಜಿನ್‍ಗಳ ದುರಸ್ತಿ, ಬಸ್‍ಗಳ ಮೇಲ್ಮೈ ಬದಲಾವಣೆ ಸಂಬಂಧಿಸಿದಂತೆ) ಸುಮಾರು ಒಂದೊಂದು ಬಸ್‍ಗಳಿಗೆ 5 ಲಕ್ಷ ರೂ. ವೆಚ್ಚ ತಗಲುತ್ತದೆ. ಇವುಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜು, ಡಿಟಿಒ ಚಂದ್ರಶೇಖರಯ್ಯ, ಸಾರಿಗೆ ಸಿಬ್ಬಂದಿ ಇದ್ದರು. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಆಲಿಸಿದರು.