ಬೆಂಗಳೂರು: ದರ ಹೆಚ್ಚಳ ಮಾಡಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಈ ಕಾರಣದಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ bi. ಶ್ರೀರಾಮುಲು ತಿಳಿಸಿದ್ದಾರೆ.
ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಅದನ್ನು ಸರಿದೂಗಿಸಲು ಪ್ರಯಾಣದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ಸದ್ಯಕ್ಕೆ ಇಲ್ಲವೆಂದು ಅವರು ತಿಳಿಸಿದ್ದಾರೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸಲು ಮತ್ತಷ್ಟು ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಕೇಂದ್ರದ ಅನುದಾನ ದೊರೆಯಲಿದ್ದು, ಆರಂಭಿಕ ಹಂತದಲ್ಲೇ 700 ಬಸ್ ಗಳನ್ನು ಖರೀದಿ ಮಾಡಲಾಗುವುದು. ಮುಷ್ಕರದಲ್ಲಿ ಭಾಗಿಯಾಗಿ ಅಮಾನತುಗೊಂಡ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿದ್ದು, ಅವರ ವಿರುದ್ಧದ ಪ್ರಕರಣಗಳನ್ನು ವಜಾ ಮಾಡುವುದು ಎಂದು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಇಲಾಖೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆ ಈ ಸಾಲಿನಲ್ಲಿ 510.24 ಕೋಟಿ ರೂಪಾಯಿ ನಷ್ಟದಲ್ಲಿದೆ. ರಾಜ್ಯದ ಸುಮಾರು ಶೇಕಡ 70 ರಷ್ಟು ಜನ ಬಸ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ಪ್ರಯಾಣ ದರ ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.