ಗದಗ: ಮುಷ್ಕರದಲ್ಲಿ ಪಾಲ್ಗೊಂಡು ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಯನ್ನು ಮರು ನೇಮಕಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ.
ಎಂಟು ತಿಂಗಳ ಹಿಂದೆ ಏಪ್ರಿಲ್ ನಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದ ಸಾರಿಗೆ ಸಂಸ್ಥೆಯ ಕೆಲವು ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು. ಮಾನವೀಯತೆ ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ನಾಲ್ಕು ವಾರದೊಳಗೆ ವಜಾಗೊಂಡ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯನ್ನು ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಈಗಾಗಲೇ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಕೆಲವು ಸಿಬ್ಬಂದಿ ಕೋರ್ಟ್ ಗೆ ಹೋಗಿರುವ ಕಾರಣ ಕಾನೂನಿನ ತೊಡಕು ಉಂಟಾಗಿದೆ. ಲೋಕ ಅದಾಲತ್ ಮೂಲಕ ಎಲ್ಲಾ ಪ್ರಕರಣ ಇತ್ಯರ್ಥಪಡಿಸಿಕೊಂಡು, ಸಿಬ್ಬಂದಿಗಳನ್ನು ಸೇವೆಗೆ ನಿಯೋಜಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.