ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರ ಕ್ಷೇತ್ರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ಸರ್ಕಾರದ ಸೇಡಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ರಸ್ತೆ ಕಾಮಗಾರಿ, ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದೆ. ಇದು ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಮಾಡುತ್ತಿರುವ ದ್ರೋಹ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರ ರೌಂಡ್ಸ್ ಮಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುನಿರತ್ನ ಕ್ಷೇತ್ರದಲ್ಲಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸವನ್ನೇ ಕುಂಟಿತಗೊಳಿಸಲಾಗಿದೆ ಎಂದರು.
ಈ ಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅಭಿವೃದ್ಧಿ ಕಾರ್ಯಕ್ಕೆ ಕೊಡಲಿ ಪೆಟ್ಟು ಕೊಡಲಾಗಿದೆ. ಈ ಕ್ಷೇತ್ರ ಮಾತ್ರವಲ್ಲ ಹಲವು ಕ್ಷೇತ್ರಗಳ ಸ್ಥಿತಿ ಇದೇ ಆಗಿದೆ. ಗುತ್ತಿಗೆದಾರರು ಕೆಲಸಕ್ಕೆ ಬರಲು ಒಪ್ಪಿತ್ತಿಲ್ಲ. ಕಮಿಷನ್ ಕೇಳುತ್ತಿದ್ದಾರೆ ಅದಕ್ಕೆ ಕೆಲಸ ಮಡಲ್ಲಾ ಅಂತಿದ್ದಾರೆ. ಸರ್ಕಾರದ ನೀತಿ ವಿರುದ್ಧ ನಾನು ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು.
ಈ ತಿಂಗಳಾಂತ್ಯಕ್ಕೆ ನಾನು ಮೂರು ದಿನ ವಿಧಾನಸೌಧದ ಮುಂಭಾಗ ಸತ್ಯಾಗ್ರಹ ಮಾಡುತ್ತೇನೆ. ಸರ್ಕಾರದ ನೀತಿ ಖಂಡಿಸಿ ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನೆ ಮಾಡುತ್ತೇವೆ. ಸತ್ಯಾಗ್ರಹದ ದಿನಾಂಕವನ್ನು ನಾಳೆ ಘೋಷಣೆ ಮಾಡುತ್ತೇನೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ರೀತಿ ಸೇಡಿನ ರಾಜಕಾರಣ ನಾನು ನಿರೀಕ್ಷಿಸರಿಲಲ್ಲ. ಆರ್.ಆರ್.ನಗರದ ಕೆಲವೆಡೆ ನೋಡಿದರೆ ನಾವು ಹಳ್ಳಿಯಲ್ಲಿದ್ದೇವಾ? ಬೆಂಗಳೂರಿನಲ್ಲಿದ್ದೇವಾ ಎಂಬ ಅನುಮಾನ ಬರುತ್ತಿದೆ ಆ ಸ್ಥಿತಿ ತಲುಪಿದೆ ರಸ್ತೆಗಳು ಎಂದು ಕಿಡಿಕಾರಿದರು.