ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಐಟಿ ದಾಳಿಯಲ್ಲಿ ಬಯಲಾಗಿದೆ. ಇದು ಲೂಟಿ ಸರ್ಕಾರ ಎಂದು ಸಾಬೀತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ನ ಬಣಗಳ ನಡುವೆ ನಾಯಕತ್ವಕ್ಕಾಗಿ ಹಗ್ಗಜಗ್ಗಾಟ ತಾರಕಕ್ಕೇರಿದೆ. ಉಪಮುಖ್ಯಮಂತ್ರಿ ಉಪಟಳಕ್ಕೆ ಕಡುವಾಣ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ ಎಂದರು.
ಸಿದ್ದರಾಮಯ್ಯನವರಿಗೆ ಸರ್ಕಾರದ ಮೇಲಾಗಲಿ, ಪಕ್ಷ ಹಾಗೂ ಸಚಿವರ ಮೇಲಾಗಲಿ ಹಿಡಿತವಿಲ್ಲದ ಸ್ಥಿತಿಯಲ್ಲಿದ್ದಾರೆ. ಉಚಿತ ವಿದ್ಯುತ್ ಅಂತ ಹೇಳಿ ಈಗ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಬರ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗಿದ್ದರೂ ಸಚಿವರು ಹೋಗಿ ವಾಸ್ತವ್ಯ ಹೂಡಿಲ್ಲ. ಬರ ಪರಿಹಾರ ಕೈಗೊಳ್ಳದೇ ಕೇಂದ್ರ ಸರ್ಕಾರಕ್ಕೆ ಮೂದಲಿಸುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ವಿಪಕ್ಷಗಳ ಮೇಲೆ ಸರ್ಕಾರದ ದಾಳಿ ಪ್ರಜಾಪ್ರಭುತ್ವದ ಅಣಕ ಎಂದು ವಾಗ್ದಾಳಿ ನಡೆಸಿದರು.
ತಮ್ಮ ವೈಫಲ್ಯ್ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಸಂಪನ್ಮೂಲದ ಒತ್ತಡದಲ್ಲಿರುವ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಎಟಿಎಂ ಆಗಿರುವುದರಿಂದಲೇ ಸುರ್ಜೇವಾಲಾ, ವೇಣುಗೋಪಾಲ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.