ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಜನಬೆಂಬಲವಿದೆ. ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನಾನಲ್ಲ ವರಿಷ್ಠರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು, ಅವರ ತಂದೆ ಯಡಿಯೂರಪ್ಪನವರಿಂದ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರ ಹೇಳಿಕೆಗಳಿಗೆಲ್ಲ ನಾನು ಉತ್ತರ ಕೊಡಬೇಕಿಲ್ಲ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ವರಿಷ್ಠರು ಹೊರತು ನಾನಲ್ಲ. ವಿಜಯೇಂದ್ರಗೆ ರಾಜ್ಯಾದ್ಯಂತ ಜನಬೆಂಬಲವಿದೆ. ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡ್ತಾರೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಕೆಲಸ ಮಾಡ್ತಾರೆ ಎಂದು ಹೇಳಿದರು.
ಇದೇ ವೇಳೆ ಶಾಸಕ ಯತ್ನಾಳ್ ಪ್ರತಿ ಬಾರಿ ಯಡಿಯೂರಪ್ಪ ಕುಟುಂಬವನ್ನೇ ಟಾರ್ಗೆಟ್ ಮಾಡಿ ಮಾತನಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಯತ್ನಾಳ್ ಏನುಬೇಕಾದರೂ ಮಾತನಾಡಲಿ. ನನ್ನ ಉದ್ದೇಶ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು ಎಂಬುದು. ಯತ್ನಾಳ್ ಜೊತೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಾಗುವುದು. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು ಹೊರತು ನಮ್ಮ ನಮ್ಮಲ್ಲೇ ಹೋರಾಟ ನಡೆಸುವುದು ಆಗಬಾರದು. ಎಲ್ಲರೂ ಒಗ್ಗಟ್ಟಿನಲ್ಲಿದ್ದು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾನು ಯತ್ನಾಳ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.