ಬೆಂಗಳೂರು: ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಮತ್ತೆ ಹಿಜಾಬ್ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯನವರು ಕೇವಲ ವೋಟ್ ಬ್ಯಾಂಕ್ ಗಾಗಿ ಈ ರೀತಿ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ. ಶಿಕ್ಷಣದ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ಕೊಡಬಾರದು. ಈಗಾಗಲೇ ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಸಿಎಂ ಸಿದ್ದರಾಮಯ್ಯ ಅನಗತ್ಯವಾಗಿ ಜಾತಿ, ಧರ್ಮಗಳ ಬಗ್ಗೆ ಒಡಕುಂಟು ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳು. ಹಾಗಾಗಿ ಎಲ್ಲರೂ ಒಂದೇ ತಾಯಿ ಮಕ್ಕಳಂತಿರಬೇಕು ಎಂಬುದು ಬಿಜೆಪಿ ತತ್ವ. ಆದರೆ ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸಬೇಕು ಎಂಬ ತೀರ್ಮಾನ ತೆಗೆದುಕೊಂಡಂತಿದೆ. ಹಿಜಾಬ್ ನಿಷೇಧ ಹಿಂಪಡೆಯುವ ಹೇಳಿಕೆಗಳಿಂದ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಆಗಲ್ಲ. ಇದೊಂದು ಭಂಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.