ಬೆಂಗಳೂರು: ರಾಜ್ಯದಲ್ಲಿ ಕೊಲೆ, ಹಲ್ಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಸರ್ಕಾರದಲ್ಲಿ ಭಯೋತ್ಪಾದಕರಿಗೆ ಗ್ಯಾರಂಟಿ ನೀಡಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯುರಪ್ಪ, ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ. ಇದೊಂದು ಕ್ರೂರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ನಡೆದಿದೆ. ಮಂಡ್ಯದಲ್ಲಿ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ನಡೆಯಿತು. ಬಿಜೆಪಿ ಕಾರ್ಯಕರ್ತನೊಬ್ಬನ ಸಾವು ಸಂಭವಿಸಿದೆ. ರಾಮ ಭಕ್ತರ ಮೇಲೆ ಹಲ್ಲೆ ನಡೆದಿದೆ. ಪ್ರಚಾರದ ವೇಳೆ ನಮ್ಮ ಕಾರ್ಯಕರ್ತನ ಮೇಲೆ ಕಾರು ಹರಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ. ರಾಜ್ಯದ ಜನರಿಗೆ ರಕ್ಷಣೆ ಇಲ್ಲದಾಗಿದೆ. ಭಯದ ವಾತಾವರಣದಲ್ಲಿ ಇವರು ಚುನಾವಣೆ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅವರಿಗೇ ರಕ್ಷಣೆ ಇರುವುದಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲದ ಸ್ಥಿತಿ. ಜನರು ಸರ್ಕಾರದ ಗ್ಯಾರಂಟಿ ಯೋನೆಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.