ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡದೆ ಸತಾಯಿಸಿದ್ದ ಬಿಜೆಪಿ ವರಿಷ್ಠರು ನೂತನ ಸಿಎಂ ಬಸವರಾಜ ಬೊಮ್ಮಾಯಿ ಪಟ್ಟು ಹಿಡಿದಿದ್ದಕ್ಕೆ ಸಚಿವ ಸಂಪುಟ ರಚನೆಗೆ ಒಪ್ಪಿಗೆ ಕೊಟ್ಟಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಏಕಾಂಗಿಯಾಗಿ ರಾಜ್ಯವನ್ನು ಸುತ್ತಾಡಿದ ಬಿ.ಎಸ್.ವೈ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತೆ ಕಾರ್ಯನಿರ್ವಹಿಸಿದ್ದರು. ಒಂದು ತಿಂಗಳು ಸಚಿವ ಸಂಪುಟ ಇಲ್ಲದೆ ಯಡಿಯೂರಪ್ಪ ಒಬ್ಬರೇ ಕಾರ್ಯನಿರ್ವಹಿಸುವಂತಾಗಿತ್ತು. ದಣಿವರಿಯದೇ ಯಡಿಯೂರಪ್ಪ ಮಳೆ, ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನೊಂದವರಿಗೆ ನೆರವಾಗಿದ್ದರು. ಆಗ ವರಿಷ್ಠರು ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡದೆ, ಪರಿಹಾರ ಕೂಡ ನೀಡದೇ ವಿಳಂಬ ಮಾಡಿ ಸತಾಯಿಸಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ವರಿಷ್ಠರನ್ನು ಭೇಟಿಯಾಗಿ ಬಂದಿದ್ದ ಬಸವರಾಜ ಬೊಮ್ಮಾಯಿ ಎರಡು ದಿನದಲ್ಲಿ ಮತ್ತೆ ದೆಹಲಿಗೆ ದೌಡಾಯಿಸಿದರು. ಪಟ್ಟು ಹಿಡಿದು ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಒಂದು ವಾರದಲ್ಲಿ ಬೊಮ್ಮಾಯಿ ಸಂಪುಟ ರಚನೆ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ದೆಹಲಿ ಪ್ರವಾಸದ ವೇಳೆ ನಾಯಕರನ್ನು ನಿರಂತರವಾಗಿ ಭೇಟಿಯಾಗಿ ಸಭೆ ಮೇಲೆ ಸಭೆಗಳನ್ನು ನಡೆಸಿ ಸಂಪುಟ ರಚನೆಗೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಸಂಸತ್ ಮುಂಗಾರು ಅಧಿವೇಶನ ನಡೆಯುತ್ತಿದ್ದ ಕಾರಣ ಕೇಂದ್ರ ನಾಯಕರ ಭೇಟಿ ವಿಳಂಬವಾಗಿದ್ದರೂ ಕೂಡ ಬಸವರಾಜ ಬೊಮ್ಮಾಯಿ ಸ್ವಲ್ಪವೂ ಸಮಯ ವಿಳಂಬಮಾಡದೆ ಸಿಕ್ಕ ಅವಧಿಯಲ್ಲಿ ದೆಹಲಿಯಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ನಿರಂತರ ಫಾಲೋ ಅಪ್ ಮೂಲಕ ವಾರದೊಳಗೆ ಸಂಪುಟ ರಚನೆಗೆ ವರಿಷ್ಠರ ಒಪ್ಪಿಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.