ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣದ ಬಗ್ಗೆ ಸಾಲು ಸಾಲು ಆರೋಪ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಡಿನೊಟಿಫಿಕೇಷನ್ ಪ್ರಕರಣಗಳ ದಾಖಲೆ ಬಿಡುಗಡೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್, ಇಬ್ಬರು ಮಾಜಿ ಸಿಎಂಗಳ ಡಿನೊಟಿಫಿಕೇಷನ್ ಪ್ರಕರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಿಎಂ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಈನಡುವೆ ಬಹಳ ಮಾತನಾಡುತ್ತಿದ್ದಾರೆ. ಸಿಎಂ ಬಗ್ಗೆ ಸಾಕಷ್ಟು ಆರೋಪಮಾಡುತ್ತಿದ್ದಾರೆ. ಮೈಸೂರಿನ ಸೈಟ್ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲಿಯವರೆಗೆ ನೀಡಿಲ್ಲ, ಬರಿ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈಗ ನಾವು ಮಾಡಿದ ಆರೋಪಗಳ ಬಗ್ಗೆ ಕುಮಾರಸ್ವಾಮಿ ಉತ್ತರ ನೀಡಬೇಕು. ಹೆಚ್.ಡಿ.ಕೆ ವಿರುದ್ಧವೂ ಡಿನೊಟಿಫಿಕೇಷನ್ ಪ್ರಕರಣ ಇದೆ. ರಾಜಶೇಖರಯ್ಯ ಈ ಆಸ್ತಿಗೆ ಏನು ಸಂಬಂಧ..? ನೀವು ಸಿಎಂ ಆಗಿದ್ದ ಕೊನೆಯ ದಿನದಲ್ಲಿ ಏನೆಲ್ಲ ಮಾಡಿದ್ರಿ? ಮೂಲ ಮಾಲೀಕರು ನಿಮ್ಮ ಅತ್ತೆ, ಬಾಮೈದಗೆ ರಿಜಿಸ್ಟರ್ ಮಾಡಿಕೊಟ್ರಾ..?ಈಗ ಚೆನ್ನಪ್ಪನವರಿಗೆ ಆಸ್ತಿ ಮಾರಾಟ ಮಾಡಿದ್ದು ನಿಜವಾ ಸುಳ್ಳಾ..? ಎಂದು ಪ್ರಶ್ನಿಸಿದ್ದಾರೆ.
ಕೇವಲ 60 ಲಕ್ಷ ರೂಪಾಯಿಗೆ ಜಮೀನು ಖರೀದಿ ಆಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಶಾಮೀಲು ಆಗಿದ್ದಾರೆ. ಅಧಿಕಾರಿಗಳು ಹೇಳಿದ ಮೇಲೂ ಯಡಿಯೂರಪ್ಪ ಕೇಳಿಲ್ಲ. ಭೂಸ್ವಾದಿನದಿಂದ ಹೇಗೆ ಯಡಿಯೂರಪ್ಪರನ್ನು ಕೈಬಿಟ್ರು? ಇವರಿಬ್ಬರ ನಡುವೇ ಏನು ಒಳ ಒಪ್ಪಂದ ಇದೆ. ಇವತ್ತಿನ ಆಸ್ತಿಯ ಬೆಲೆ ನೂರು ಕೋಟಿಮೇಲೆ ಬೆಲೆ ಬಾಳುತ್ತೆ. ಅದನ್ನು ಕೇವಲ 60 ಲಕ್ಷಕ್ಕೆ ಲಪಟಾಯಿಸಿದ್ದೀರಾ. ಸರ್ಕಾರದ ಆಸ್ತಿ ಕಬಳಿಸಿದ್ದಾರೆ. ಎಫ್ಐಆರ್ ಆಗಿ 9 ವರ್ಷವಾದರೂ ಯಾಕೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.