ಬೆಂಗಳೂರು: ರಾಜ್ಯ ಸರ್ಕಾರಕ್ಕೆ ವರ್ಷ ತುಂಬಿದ ಸಂಭ್ರಮದಲ್ಲೇ ಮೊದಲ ವಿಕೆಟ್ ಪತನ ಬಹುತೇಕ ನಿಶ್ಚಿತವಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಸಂಪುಟದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷಕ ಪಿ. ಚಂದ್ರಶೇಖರನ್ ಡೆತ್ ನೋಟ್ ನಿಂದ ಬಯಲಿಗೆ ಬಂದ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೂನಿಯನ್ ಬ್ಯಾಂಕ್ ದೂರು ಆಧರಿಸಿ ಸಿಬಿಐ ಎಂಟ್ರಿ ಪಡೆಯುವ ಸುಳಿವು ಸಿಗುತ್ತಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹಿರಿಯ ಸಚಿವರ ಸಭೆ ನಡೆಸಿದ್ದಾರೆ. ಸರ್ಕಾರಕ್ಕೆ ಈ ಪ್ರಕರಣ ತೀವ್ರ ಮುಜುಗರ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಿಗಮದ ಬಹುಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಸಚಿವರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಜೂ. 6ರವರೆಗೆ ಗಡುವು ನೀಡಿದ್ದು, ಸಚಿವ ನಾಗೇಂದ್ರ ತಲೆ ದಂಡ ಖಚಿತ ಎನ್ನಲಾಗಿದೆ.