
ಶಿವಮೊಗ್ಗ: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ವಿರುದ್ಧ ದಾಖಲಾಗಿದ್ದ ಜಾತಿನಿಂದನೆ ಪ್ರಕರಣದಲ್ಲಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಭದ್ರಾವತಿಯಲ್ಲಿ ಫೆಬ್ರವರಿ 28 ರಂದು ಕಬಡ್ಡಿ ಪಂದ್ಯಾವಳಿ ನಡೆಯುವಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಈ ಪ್ರಕರಣದಲ್ಲಿ ಸಂಗಮೇಶ್ವರ್ ಅವರ ಸಹೋದರ ಮೋಹನ್ ಮತ್ತು ಸಂಗಮೇಶ್ ಪುತ್ರ ಗಣೇಶ್ ಸೇರಿದಂತೆ ಹಲವರ ವಿರುದ್ಧ ಕೊಲೆಯತ್ನ, ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಬಿಜೆಪಿ ಮುಖಂಡರ ವಿರುದ್ಧವೂ ಪ್ರತಿದೂರು ದಾಖಲಿಸಲಾಗಿದೆ.
ವಿಧಾನಸಭೆಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಂಗಮೇಶ್ವರ್ ಅಂಗಿ ತೆಗೆದು ಪ್ರತಿಭಟನೆ ನಡೆಸಿದ್ದರು. ಅವರನ್ನು ಸದನದಿಂದ ಅಮಾನತು ಮಾಡಲಾಗಿದೆ. ಬಂಧನ ಭೀತಿ ಹಿನ್ನೆಲೆಯಲ್ಲಿ ಶಾಸಕರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕುಡು ಒಕ್ಕಲಿಗರ್ ಸೋಮಪ್ಪ ನಿರೀಕ್ಷಣಾ ಜಾಮೀನು ನೀಡಿದ್ದಾರೆ.