ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತಿದ್ದೇನೆ. ಲೌಕಿಕ ಜೀವನದಿಂದ ಆಧಾತ್ಮಿಕ ಜೀವನದತ್ತ ಹೆಜ್ಜೆಯನ್ನಿಡುತ್ತಿದ್ದೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇ 6ರಂದು ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಜಯೇಂದ್ರ ತೀರ್ಥ ಪುರಿ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲಿದ್ದೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮ ತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದರು.
ಸ್ವಾಮೀಜಿಗಳಲ್ಲಿ ಮಾಂತ್ರಿಕ ಸ್ವಾಮೀಜಿ, ವೈದಿಕ ಸ್ವಾಮೀಜಿ, ಸ್ವಾರ್ಥ ಸ್ವಾಮೀಜಿ, ಆಶೀರ್ವಾದ ಸ್ವಾಮೀಜಿಗಳಿರುತ್ತಾರೆ. ಕೊನೆದಾಗಿ ಸಮಾಜ ಸುಧಾರಣಾ ಸ್ವಾಮೀಜಿಗಳು ಇರುತ್ತಾರೆ. ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಪುಟ್ಟಸ್ವಾಮಿ ತಿಳಿಸಿದರು. ನಾನು ಸಚಿವ ಸಂಪುಟ ದರ್ಜೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಆದ್ರೆ ನನಗೆ ಅಧಿಕಾರಕ್ಕಿಂತ ಹೆಚ್ಚಾಗಿ ನಮ್ಮ ಜನಾಂಗದ ಭವಿಷ್ಯ ಮುಖ್ಯ. ಹೀಗಾಗಿ ನಮ್ಮ ಜನಾಂಗದ ಭವಿಷ್ಯಕ್ಕಾಗಿ ನನ್ನ ಜೀವಾವಧಿಯಲ್ಲಿ ಗುರುಪೀಠವನ್ನು ಸ್ಥಾಪನೆ ಮಾಡಿ, ಜನರ ಅಭಿಪ್ರಾಯ ಪಡೆದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಮೇ 15 ರಂದು ಬೆಂಗಳೂರಿನ ಮಾದನಾಯ್ಕನಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಲಿದ್ದಾರೆ.