ಬೆಂಗಳೂರು: ಬಿಜೆಪಿಯಲ್ಲಿ ಒಂದೆಡೆ ಬಣ ಬಡಿದಾಟ ಜೋರಾಗಿದ್ದರೆ ಮತ್ತೊಂದೆಡೆ ಯತ್ನಾಳ್ ಬಣ ಹಾಗೂ ವಿಜಯೇಂದ್ರ ಬಣಗಳ ಪ್ರತ್ಯೇಕ ಸಭೆಗಳು ಭಾರಿ ಸದ್ದು ಮಾಡುತ್ತಿವೆ. ಈ ನಡುವೆ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಶಾಸಕರ ಸಭೆ ಕರೆದಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ರಾಧಾಮೋಹನ್ ದಾಸ್ ಅವರು ಬಿಜೆಪಿ ಶಾಸಕರ ಸಭೆ ಕರೆದಿದ್ದಾರೆ. ಶಾಸಕರ ಸಭೆ ಕರೆದಿರುವ ವಿಷಯ ಕೇಳಿ ನನಗೆ ಶಾಕ್ ಆಯ್ತು. ರಾಧಾಮೋಹನ್ ದಾಸ್ ಅವರು ಸೋತವರ ಸಭೆಯನ್ನೂ ಕರೆಯಬೇಕಿತ್ತು ಎಂದು ಹೇಳಿದ್ದಾರೆ.
ಕೇವಲ 66 ಶಾಸಕರಿಂದ ಸರ್ಕಾರ ರಚನೆ ಮಾಡುವುದಕ್ಕೆ ಆಗಲ್ಲ. ಮಾಜಿ ಶಾಸಕರನ್ನು ಬಿಟ್ಟು ಸಭೆ ಮಾಡುತ್ತಿರುವುದು ನಮಗೆ ಅವಮಾನ. ರಾಧಾಮೋಹನ್ ದಾಸ್ ಅಗರ್ವಾಲ್ ಭೇಟಿಗೆ ನಾವು ಸಮಯ ಕೇಳಿದ್ದೇವೆ. ಭೇಟಿ ವೇಳೆ ಚರ್ಚಿಸುತ್ತೇವೆ ಎಂದು ಹೇಳಿದರು.