ಶೃಂಗೇರಿ: ಬೆಳೆಯುವ ಮಕ್ಕಳಿಗೆ ಪೋಷಕರು ಹೇಳುವ ಬುದ್ಧಿವಾದವನ್ನು ಕೇಳುವ ತಾಳ್ಮೆಯೂ ಇಲ್ಲದಾಗಿದೆ. ಒಂದು ಮಾತು ಹೇಳಿದರೂ ಅದನ್ನೇ ನೆಪ ಮಾಡಿಕೊಂಡು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾರೆ. ಇಲ್ಲೋರ್ವ ವಿದ್ಯಾರ್ಥಿನಿ ತಂದೆ-ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದ ಹರಾವರಿಯಲ್ಲಿ ಈ ಘಟನೆ ನಡೆದಿದೆ. ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಪದವಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
19 ವರ್ಷದ ಸುರಕ್ಷಾ ಮೃತ ವಿದ್ಯಾರ್ಥಿನಿ. ಸುರಕ್ಷಾ, ಸಚ್ಚಿದಾನಂದಪುರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿದ್ದುಕೊಂಡು, ಶೃಂಗೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿದ್ದಳು. ಗಣೇಶ ಹಬ್ಬಕ್ಕೆಂದು ಮನೆಗೆ ಬಂದಿದ್ದ ಸುರಕ್ಷಾಳಿಗೆ ಹಲವು ವಿಷಯದ ಬಗ್ಗೆ ಪೋಷಕರು ಬುದ್ಧಿ ಮಾತು ಹೇಳಿದ್ದರು. ಇದರಿಂದ ಮನನೊಂದ ಸುರಕ್ಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.