ಭಾರತೀಯ ಸಾಫ್ಟ್‌ವೇರ್ ದಿಗ್ಗಜ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಭಾರತದ ಪರೋಪಕಾರಿ ಬಿಲಿಯನೇರ್ ಗಳಲ್ಲಿ ಎರಡನೇ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಇವರು 9,713 ಕೋಟಿ ರೂ. ಮೌಲ್ಯದ ದೇಣಿಗೆಗಳನ್ನು ನೀಡಿದ್ದಾರೆ. ಅಂದರೆ ಪ್ರತಿದಿನ 27 ಕೋಟಿ ರೂ. ದೇಣಿಗೆ ನೀಡುತ್ತಾರೆ.
ಗುರುವಾರ ಬಿಡುಗಡೆಯಾದ ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿ 2021 ರ ಪ್ರಕಾರ, ಪ್ರೇಮ್‌ಜಿ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ದೇಣಿಗೆಯನ್ನು ಶೇಕಡಾ 23 ರಷ್ಟು ಹೆಚ್ಚಿಸಿದ್ದಾರೆ. ಹತ್ತು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್‌ನ ಕೆಲಸವನ್ನು ವಿಸ್ತರಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ 1,125 ಕೋಟಿ ರೂ.ನಿಂದ 2,125 ಕೋಟಿ ರೂ.ಗೆ ತನ್ನ ಹಂಚಿಕೆಯನ್ನು ದ್ವಿಗುಣಗೊಳಿಸಿದೆ.
ಹೆಚ್‍ಸಿಎಲ್ ಟೆಕ್ನಾಲಜೀಸ್‍ನ ಶಿವ ನಾಡರ್ ಅವರು 1263 ಕೋಟಿ ರೂ. ದೇಣಿಗೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಆರ್ಥಿಕ ವರ್ಷದಲ್ಲಿ 577 ಕೋಟಿ ರೂ. ದೇಣಿಗೆಯೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರೆ, ಕುಮಾರ ಮಂಗಲಂ ಬಿರ್ಲಾ 377 ಕೋಟಿ ರೂ. ಕೊಡುಗೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ 183 ಕೋಟಿ ರೂ. ದೇಣಿಗೆಯೊಂದಿಗೆ ಐದನೇ ಸ್ಥಾನ ಪಡೆದಿದ್ದರೆ, ಹಿಂದೂಜಾವು 166 ಕೋಟಿ ರೂ. ದೇಣಿಗೆಯೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ಬಜಾಜ್ 136 ಕೋಟಿ ರೂ. ದೇಣಿಗೆಯೊಂದಿಗೆ ಏಳನೇ ಸ್ಥಾನದಲ್ಲಿದೆ. 130 ಕೋಟಿ ದೇಣಿಗೆಗಾಗಿ ಗೌತಮ್ ಅದಾನಿ ಮತ್ತು ಅನಿಲ್ ಅಗರ್ವಾಲ್ ಜಂಟಿಯಾಗಿ ಎಂಟನೇ ಶ್ರೇಯಾಂಕವನ್ನು ಪಡೆದಿದ್ದಾರೆ.