ಶಿವಮೊಗ್ಗ: ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಿಂತು ವ್ಯಕ್ತಿಯೊಬ್ಬ ಆಜಾನ್ ಕೂಗಿದ ಘಟನೆ ನಡೆದಿದೆ.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಜಾನ್ ಬಗ್ಗೆ ಹೇಳಿಕೆ ನೀಡಿದ್ದನ್ನು ಮಾ. 17 ರಂದು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿ ಉದ್ಧಟತನ ಪ್ರದರ್ಶಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.
ಆಜಾನ್ ಕೂಗಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆ ವ್ಯಕ್ತಿಯನ್ನು ಕರೆದು ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿ ಮುಂಜಾಗ್ರತಾ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಘಟನೆ ನಡೆದ ಸಮಯದಲ್ಲಿ ಹಾಜರಿದ್ದ ವ್ಯಕ್ತಿಗಳ ಪೂರ್ವಪರದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ಸದರಿ ಮಾಹಿತಿಯ ಆಧಾರದ ಮೇಲೆ ಅವರುಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.