
ಬೆಂಗಳೂರು: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಉನ್ನತ ಮಟ್ಟದ ಸರ್ಕಾರಿ ಆಸ್ಪತ್ರೆ ಅಥವಾ SAST ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲು ‘ಅಂತರ್ಜಾಲ ರೆಫರಲ್ ವ್ಯವಸ್ಥೆ’ ಜಾರಿ ತರಲಾಗಿದೆ.
ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಸಕಾಲದಲ್ಲಿ ಮೇಲ್ಪಟ್ಟದ ಉನ್ನತ ಚಿಕಿತ್ಸಾ ಆಸ್ಪತ್ರೆಗೆ ನಿರ್ದೇಶಿಸುವುದು ಆಭಾ-ಆಕ ಯೋಜನೆಯ ಪ್ರಮುಖ ಅಂಶವಾಗಿದೆ. ಈವರೆಗೆ, ರೆಫರಲ್ ಅನ್ನು ಹಸ್ತಪ್ರತಿ ಚೀಟಿಗಳಲ್ಲಿ ಮಾಡುತ್ತಿದ್ದು, ಇದು ರೆಫರ್ ಮಾಡುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಶ್ರಮದಾಯಕವಾಗಿ ಪರಿಣಮಿಸುತ್ತಿತ್ತು.
ಹೊಸ ಅಂತರ್ಜಾಲ ರೆಫರಲ್ ವ್ಯವಸ್ಥೆಯಲ್ಲಿ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಆಸ್ಪತ್ರೆಯ ನೋಡಲ್ ಅಧಿಕಾರಿಗಳು ತಮ್ಮ ಬಳಕೆದಾರರ ಗುರುತಿನ ಚೀಟಿಯ ಮೂಲಕ ಅಂತರ್ಜಾಲ ಪ್ರವೇಶಿಸಿ ರೋಗಿಗಳನ್ನು ಉನ್ನತ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಈ ತಂತ್ರಜ್ಞಾನ ಆಧರಿತ ವ್ಯವಸ್ಥೆಯಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದರ ಜೊತೆಗೆ ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ. ಎಲ್ಲಾ ರೋಗಿಗಳು, ಕುಟುಂಬದವರು ಹಾಗೂ ವೈದ್ಯರಿಗೆ ಇದರಿಂದ ಅನುಕೂಲವಾಗಲಿದೆ. ವಂಚನೆ, ದುರುಪಯೋಗವನ್ನೂ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.