ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಹೊಂದಿದವರು ದೇಶಾದ್ಯಂತ ಸುಲಭವಾಗಿ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಕಾರ್ಡ್ ನಿಂದ ಈ ಹಿಂದೆ ನೀಡಲಾದ ಚಿಕಿತ್ಸೆಯ ದತ್ತಾಂಶ ಕೂಡ ದೊರೆಯಲಿದೆ. ಸೆ. 30ರವರೆಗೆ ಆಯುಷ್ಮಾನ್ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ವೈದ್ಯಕೀಯ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಗಳನ್ನು ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಆನ್ಲೈನ್ ಮೂಲಕವೇ ಆಸ್ಪತ್ರೆಗೆ ರೆಫರಲ್ ಮಾಡಲು ಆಯುಷ್ಮಾನ್ ಭಾರತ್ ಕಾರ್ಡ್ ಸಹಕಾರಿಯಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯಗಳು ಇಲ್ಲದಿದ್ದರೆ ರೋಗಿಯ ಆಯ್ಕೆಯ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ 1,650 ಚಿಕಿತ್ಸಾ ಪ್ಯಾಕೇಜ್ ಗಳು ಲಭ್ಯವಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. 36 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಈವರೆಗೆ ಸೌಲಭ್ಯ ಪಡೆದುಕೊಂಡಿದ್ದಾರೆ.
ಆಧಾರ್ ಜೋಡಣೆಯಾಗಿರುವ ಪಡಿತರ ಚೀಟಿ ಆಧಾರದ ಮೇಲೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ಮೇಲ್ವಿಚಾರಣೆಯಲ್ಲಿರುವ ಎಲ್ಲಾ ನಾಗರೀಕ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ.