ಬೆಂಗಳೂರು: ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ಹೊರತಾಗಿ ಮತ್ತೇನೂ ದಾಖಲೆ ಕೇಳುವಂತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಫಲಾನುಭವಿಗಳಿಗೆ ಕಾರ್ಡ್ ಹೊರತುಪಡಿಸಿ ಬೇರೆ ಯಾವುದೇ ದಾಖಲೆ ಕೇಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತರು ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಬಿಪಿಎಲ್, ಎಪಿಎಲ್ ಕುಟುಂಬದ ಸದಸ್ಯರಿಗೆ ಶುಲ್ಕರಹಿತ ಮತ್ತು ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 1.5 ಕೋಟಿ ಆರೋಗ್ಯ ಕಾರ್ಡ್ ನೀಡಲಾಗಿದ್ದು, ಚಿಕಿತ್ಸೆಗೆ ಬರುವ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ತೋರಿಸಿದ ನಂತರವೂ ರೇಷನ್ ಕಾರ್ಡ್ ಸೇರಿದಂತೆ ಕೆಲವು ದಾಖಲೆಗಳನ್ನು ನೀಡುವಂತೆ ಸೂಚಿಸಲಾಗುತ್ತಿದೆ. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಡ್ ಹೊರತುಪಡಿಸಿ ಬೇರೆ ದಾಖಲೆ ಹಾಜರುಪಡಿಸುವ ಅಗತ್ಯವಿಲ್ಲ. ಪೂರಕ ದಾಖಲೆಗಳನ್ನು ಕೇಳುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.