ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸೌಲಭ್ಯ ಮತ್ತಷ್ಟು ಉತ್ತಮಪಡಿಸುವ ಉದ್ದೇಶದಿಂದ ಹಲವು ಬದಲಾವಣೆ ತರಲಾಗುತ್ತಿದೆ.
ದೇಶಾದ್ಯಂತ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಲು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎ.ಬಿ.ಎ.ಆರ್.ಕೆ. ಕೋ ಬ್ರಾಂಡೆಡ್ ಕಾರ್ಡ್ ವಿತರಿಸಲಾಗುತ್ತಿದೆ. 1.39 ಕೋಟಿ ಜನ ಕೋ ಬ್ರಾಂಡೆಡ್ ಕಾರ್ಡ್ ಗೆ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಡ್ ವಿತರಣೆ ವಿಳಂಬವಾಗಿದ್ದು, ಆರೋಗ್ಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋ ಬ್ರಾಂಡೆಡ್ ಕಾರ್ಡ್ ಬಳಸಿಕೊಂಡು ಕರ್ನಾಟಕ ಮಾತ್ರವಲ್ಲದೇ ದೇಶದ ಯಾವುದೇ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ರೆಫರ್ಲ ಆಗಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ದಾರರು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಎಪಿಎಲ್ ಕಾರ್ಡ್ ಹೊಂದಿದವರಿಗೆ ಕರ್ನಾಟಕದಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಮತ್ತು ಯೋಜನೆ ಅಡಿ ಶೇಕಡ 30ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೋ ಬ್ರಾಂಡೆಡ್ ಕಾರ್ಡ್ ಕಡ್ಡಾಯವಿಲ್ಲ. ಈ ಮೊದಲು ನೀಡಿದ್ದ ಆರೋಗ್ಯ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ.
ಆಧಾರ್ ಕಾರ್ಡ್ ನಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆ ಮಾದರಿಯಲ್ಲಿ ಕೋ ಬ್ರಾಂಡೆಡ್ ಕಾರ್ಡ್ ನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಅಕೌಂಟ್ ನಂಬರ್ ಇರುತ್ತದೆ. ಈ ಮೊದಲು ನೀಡಲಾಗಿದ್ದ ಆರೋಗ್ಯ ಕಾರ್ಡ್ ಅಥವಾ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಬಳಸಿಕೊಂಡು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಕಾರ್ಡ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ವೈದ್ಯರಿಗೆ ರೋಗಿಯ ಆರೋಗ್ಯದ ಸಂಪೂರ್ಣ ಮಾಹಿತಿ ಆನ್ಲೈನ್ ಮೂಲಕ ಲಭ್ಯವಾಗುತ್ತದೆ. ಇದರಿಂದ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.
ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಸಿಟಿಜನ್ ಸರ್ವಿಸ್ ಸೆಂಟರ್ ನಲ್ಲಿ ಈ ಕಾರ್ಡ್ ಪಡೆಯಬಹುದು.