ಬೆಂಗಳೂರು: ಬಡವರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಜಾರಿಯಾಗಿ ಮೂರು ವರ್ಷ ಕಳೆದಿದ್ದು, ಅಗತ್ಯ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಲು ಫಲಾನುಭವಿಗಳು ಪರದಾಡುವಂತಾಗಿದೆ ಎನ್ನಲಾಗಿದೆ.
3 ವರ್ಷದ ಅವಧಿಯಲ್ಲಿ 1.47 ಕೋಟಿಯಷ್ಟು ಜನರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ. ಯೋಜನೆಯಡಿ ಹೃದಯಾಘಾತ, ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದು ನಂತರ ನೊಂದಾಯಿತ ಆಸ್ಪತ್ರೆಗಳಿಗೆ ಸ್ಥಳಾಂತರವಾಗಲು ಕೂಡ ಅವಕಾಶವಿದೆ.
ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಿರುತ್ತದೆ. ಆದರೆ, ಯೋಜನೆಯಡಿ ನೋಂದಣಿಯಾಗದಿದ್ದರೆ ವ್ಯಕ್ತಿಗೆ ತುರ್ತುಚಿಕಿತ್ಸೆಯ ಲಾಭ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹಣ ಪಾವತಿಸಬೇಕಿದೆ. ಯೋಜನೆಯಡಿ ಇನ್ನೂ ಹಲವು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸಬೇಕೆಂದು ಹೇಳಲಾಗಿದೆ.