alex Certify ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಸದನದಲ್ಲಿ ಮಹತ್ವದ ಚರ್ಚೆ: ವಯೋ ವಂದನ ಯೋಜನೆ ಬಗ್ಗೆಯೂ ಸ್ಪಷ್ಟನೆ ನೀಡಿದ ಸಚಿವ ದಿನೇಶ್ ಗುಂಡೂರಾವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಸದನದಲ್ಲಿ ಮಹತ್ವದ ಚರ್ಚೆ: ವಯೋ ವಂದನ ಯೋಜನೆ ಬಗ್ಗೆಯೂ ಸ್ಪಷ್ಟನೆ ನೀಡಿದ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚಗಳನ್ನ ಪರಿಷ್ಕರಿಸಿದರೆ ಯೋಜನೆಯ ಶೇ 90 ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರದ ನೀತಿಗಳ ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನವನ್ನು ಒದಗಿಸಬೇಕು. ಆದರೆ ಕರ್ನಾಟಕದಲ್ಲಿ ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯ ಸರ್ಕಾರವೇ ಶೇ 75 ರಷ್ಟು ಹಣಕಾಸಿನ ನೆರವನ್ನ ಒದಗಿಸುತ್ತಿದೆ ಎಂದರು.

ಕೇಂದ್ರ ಸರ್ಕಾರ ಕೇವಲ ಶೇ 25 ರಷ್ಟು ಅನುದಾನ ನೀಡುತ್ತಿದೆ. ಇನ್ನು ಯೋಜನೆಯಡಿ ಚಿಕಿತ್ಸಾ ವೆಚ್ಚಗಳು 2018 ರಿಂದ ಪರಿಷ್ಕರಣೆ ಆಗಿಲ್ಲ.‌ ಪರಿಷ್ಕರಣೆಗೆ ಮುಂದಾದರೆ ಯೋಜನೆಗೆ ರಾಜ್ಯ ಸರ್ಕಾರವೇ ಶೇ 90 ರಷ್ಟು ಅನುದಾನ ಭರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಅನುದಾನದ ಪಾಲು ಶೇ 10 ಕ್ಕೆ ಬಂದು ನಿಲ್ಲಲಿದೆ ಎಂದು ವಿವರಿಸಿದರು.

70 ವರ್ಷ ಮೇಲ್ಪಟ್ಟವರಿಗೆ ವಯೋ ವಂದನ ಯೋಜನೆ ಅನುಷ್ಠಾನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯೋಜನೆ ಅನುಷ್ಠಾನಕ್ಕೆ 68 ಕೋಟಿ ಅಗತ್ಯತೆ ಇದ್ದು, ಶೇ 60 ರಷ್ಟು ಹಣಕಾಸನ್ನ ಕೇಂದ್ರ ಸರ್ಕಾರ ಭರಿಸಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಹಂಚಿಕೆ ಬಗ್ಗೆ ರಾಜ್ಯ ಸ್ಪಷ್ಟನೆ ಕೇಳಿದೆ. ಆದರೆ ಇಲ್ಲಿಯ ವರೆಗು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಪಾಲುದಾರಿಕೆ ಬಗ್ಗೆ ಉತ್ತರಿಸಿಲ್ಲ. ಆದರೆ ಈಗಾಗಲೇ ರಾಜ್ಯ ಸರ್ಕಾರ 1 ಕೋಟಿ 12 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನ ಒದಗಿಸಿಕೊಟ್ಟಿದೆ. ಆದರೆ ಇದರಲ್ಲಿ ಕೇಂದ್ರ ಸರ್ಕಾರ 68 ಲಕ್ಷ ಜನರಿನ್ನ ಮಾತ್ರ ಆಯುಷ್ಮಾನ್ ಭಾರತ್ ಯೋಜನೆಯಡಿ ಪರಿಗಣಿಸುತ್ತಿದೆ.

ರಾಜ್ಯ ಸರ್ಕಾರ 1 ಕೋಟಿ 12 ಲಕ್ಷ ಜನರನ್ನ ಯೋಜನೆಯ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಬಹುತೇಕ 70 ವರ್ಷ ಮೇಲ್ಪಟ್ಟವರು ಯೋಜನೆಯ ಅಡಿ ಫಲಾನುಭವಿಗಳಾಗಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ಸ್ಪಷ್ಟಪಡಿಸಿದರು. ಅಲ್ಲದೇ APL ಕಾರ್ಡ್ ಹೊಂದಿದವರಿಗು ರಾಜ್ಯ ಸರ್ಕಾರ ಯೋಜನೆಯಡಿ ಶೇ 30 ರಷ್ಟು ಚಿಕಿತ್ಸಾ ವೆಚ್ಚಗಳನ್ನು ಭರಿಸುತ್ತಿದೆ. ಪ್ರತ್ಯೇಕವಾಗಿ 70 ವರ್ಷ ಮೇಲ್ಪಟ್ಟವರಿಗೆ ವಯೋ ವಂದನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಅನುದಾನದ ಕುರಿತು ಸ್ಪಷ್ಟನೆ ಬಂದ ಬಳಿಕ ಜಾರಿಗೆ ತರಲಾಗುವುದು ಎಂದರು.

ಆಯುಷ್ಮಾನ್ ಭಾರತ್ ಯೋಜನೆ ವಿಚಾರದಲ್ಲಿ ನೈಜವಾಗಿ ಹೆಚ್ಚಿನ ಅನುದಾನ ರಾಜ್ಯ ಸರ್ಕಾರ ಒದಗಿಸುತ್ತಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು ಚಿಕಿತ್ಸಾ ವೆಚ್ಚಗಳ ಪರಿಷ್ಕರಣೆಗೆ ಒತ್ತಾಯಿಸಬೇಕು. ರಾಜ್ಯ ಸರ್ಕಾರದಿಂದ ಈ ಪ್ರಯತ್ನ ನಡೆಯುತ್ತಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...