
ನವದೆಹಲಿ: ದೇಶದ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟು ವೇಗ ನೀಡಲು ಮುಂದಾಗಿದೆ. ಅಲ್ಲದೇ, ಇನ್ನೂ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಿದೆ.
ಆಯುಷ್ಮಾನ್ ಯೋಜನೆ ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವ ಹೆಚ್ಚಳ ಮಾಡಲಾಗುತ್ತದೆ. ಇದಕ್ಕಾಗಿ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ವೇಗವಾಗಿ ಹಣ ಬಿಡುಗಡೆ ಮಾಡುವುದು, ಉತ್ತಮ ಆಸ್ಪತ್ರೆಗಳಿಗೆ ಬಹುಮಾನ ನೀಡುವುದು ಸೇರಿದಂತೆ ಹಲವು ಉತ್ತೇಜನಕಾರಿ ಕ್ರಮಕೈಗೊಳ್ಳಲಾಗಿದೆ.
ಇನ್ನು ಆಯುಷ್ಮಾನ್ ಫಲಾನುಭವಿಗಳ ಪ್ರತಿ ಕುಟುಂಬಕ್ಕೆ ಕಾರ್ಡ್ ನೀಡಲಾಗುತ್ತಿದ್ದು, ಇನ್ನು ಮುಂದೆ ಪ್ರತಿ ಫಲಾನುಭವಿಗಳಿಗೆ ಕೂಡ ನೀಡಲಾಗುವುದು. ಯೋಜನೆ ಆರಂಭವಾದಾಗಿನಿಂದ ಪ್ರತಿ ಕುಟುಂಬಕ್ಕೆ ಒಂದು ಕಾರ್ಡ್ ನೀಡಲಾಗುತ್ತಿತ್ತು. ಈಗ ಚಿಕಿತ್ಸೆ ಪ್ರತಿ ಫಲಾನುಭವಿಗಳಿಗೂ ಅನುಕೂಲವಾಗುವಂತೆ ಪ್ರತ್ಯೇಕ ಕಾರ್ಡ್ ನೀಡಲಾಗುವುದು.
10 ಕೋಟಿ ಬಡಕುಟುಂಬದ 50 ಕೋಟಿ ಜನರಿಗೆ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಭದ್ರತೆ ಒದಗಿಸುವ ಯೋಜನೆ ಇದಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಯೋಜನೆಯನ್ನು ಜಾರಿಗೊಳಿಸಿದ್ದು, 22,831 ಆಸ್ಪತ್ರೆಗಳು ಆಯುಷ್ಮಾನ್ ಯೋಜನೆ ವ್ಯಾಪ್ತಿಯಲ್ಲಿವೆ.