ಕೊರೊನಾ ವೈರಸ್ನ ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಎಂಬ ಭಯವಿದೆ. ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಹಾಗಾಗಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅವಶ್ಯಕತೆಯಿದೆ. ಅಖಿಲ ಭಾರತ ಆಯುರ್ವೇದ ಸಂಸ್ಥೆ, 16 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಾಲ ರಕ್ಷಾ ಕಿಟ್ ಅಭಿವೃದ್ಧಿಪಡಿಸಿದೆ.
ಈ ಕಿಟ್, ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಮಕ್ಕಳನ್ನು ಸಿದ್ಧಪಡಿಸಲಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆಯುಷ್ ಸಚಿವಾಲಯದ ಅಧಿಕಾರಿಗಳು ಕಿಟ್ ನಲ್ಲಿ ತುಳಸಿ, ಗಿಲೋಯ್, ದಾಲ್ಚಿನ್ನಿ, ಒಣಗಿದ ದ್ರಾಕ್ಷಿಯಿಂದ ತಯಾರಿಸಿದ ಸಿರಪ್ ನೀಡಲಿದ್ದಾರೆ. ಇದು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಯುಷ್ ಸಚಿವಾಲಯದ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಈ ಕಿಟ್ ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್ ತಯಾರಿಸಿದೆ.
ಅಖಿಲ ಭಾರತ ಆಯುರ್ವೇದ ಸಂಸ್ಥೆ, ನವೆಂಬರ್ 2 ರಂದು ರಾಷ್ಟ್ರೀಯ ಆಯುರ್ವೇದ ದಿನದಂದು 10,000 ಕಿಟ್ಗಳನ್ನು ಉಚಿತವಾಗಿ ವಿತರಿಸಲಿದೆ. ಭಾರತದಲ್ಲಿ ಇನ್ನೂ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಿಲ್ಲ. ಆದ್ದರಿಂದ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಈ ಮಕ್ಕಳ ರಕ್ಷಣಾ ಕಿಟ್, ಮಕ್ಕಳಿಗೆ ರಕ್ಷಣೆ ನೀಡಲಿದೆ ಎನ್ನಲಾಗಿದೆ.
ಎಐಐಎ ನಿರ್ದೇಶಕಿ ಡಾ.ತನುಜಾ ನೇಸರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳು ಕಷಾಯ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಕಷಾಯವು ಕಹಿಯಾಗಿರುವುದರಿಂದ, ಮಕ್ಕಳಿಗೆ ಇದನ್ನು ತೆಗೆದುಕೊಳ್ಳುವುದು ಕಷ್ಟಕರವಾಗಿದೆ. ಕಷಾಯದ ಸಿರಪ್ ತಯಾರಿಸಲಾಗಿದೆ. ಇದು ಶೀತ ಮತ್ತು ಕೆಮ್ಮು ಸೇರಿದಂತೆ ಕೆಲ ರೋಗಗಳನ್ನು ತಡೆಯಲಿದೆ.