
ಶಿವಮೊಗ್ಗ: ಆಯುಧ ಪೂಜೆಯನ್ನು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು.
ಅಂಗಡಿ ಮಾಲೀಕರು ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳ ಎದುರು ಬೆಳಿಗ್ಗೆಯಿಂದಲೇ ರಂಗೋಲಿಗಳು ಕಂಗೊಳಿಸುತ್ತಿದ್ದವು.
ಮನೆ, ಕಚೇರಿಗಳ ಎದುರು ವಾಹನಗಳನ್ನು ನಿಲ್ಲಿಸಿ, ಬೂದಗುಂಬಳ ಕಾಯಿ ಒಡೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬಂತು. ವಾಹನಗಳಿಗೆ ಹಾರ ಹಾಕಿ ಸಿಂಗರಿಸಲಾಗಿತ್ತು.
ಆಯುಧಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೆ, ವಾಹನಗಳಿಗೆ, ಯಂತ್ರೋಪಕರಣಗಳು, ಕೃಷಿ ಉಪಕರಣ, ಸಲಕರಣೆಗಳಿಗೆ ಪೂಜೆ ಸಲ್ಲಿಸಿರುವ ಸಂಪ್ರದಾಯ ಇರುವುದರಿಂದ ಜನರು ಪೂಜೆ ಮಾಡಿದರು. ಹಿಟ್ಟಿನ ಗಿರಣಿ, ವರ್ಕ್ ಶಾಪ್ ಸೇರಿ ಅನೇಕ ಅಂಗಡಿಗಳ ಮಾಲೀಕರು ಕೂಡ ಆಯುಧಪೂಜೆ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಬೂದಗುಂಬಳ, ನಿಂಬೆಹಣ್ಣು ಹಾಗೂ ಬಾಳೆ ಕಂದುಗಳಿಗೆ ಬೇಡಿಕೆ ಹೆಚ್ಚಿತ್ತು. ರಸ್ತೆಬದಿಯಲ್ಲಿ 20 ರೂ.ನಿಂದ 40ರೂ.ರವರೆಗೂ ಬಾಳೆಕಂಬಗಳನ್ನು ಮಾರುತ್ತಿದ್ದರು.
ಮಾವಿನ ಎಲೆ, ಹೂ, ಹಣ್ಣು ಖರೀದಿಯೂ ಜೋರಾಗಿತ್ತು. ಬಹುತೇಕ ದೇವಸ್ಥಾನಗಳಲ್ಲಿ ಸರತಿ ಸಾಲು ಹೆಚ್ಚಿತ್ತು. ಭಕ್ತರು ಬಾಳೆಹಣ್ಣು, ಅವಲಕ್ಕಿ ಬೆಲ್ಲದ ಪ್ರಸಾದ ಸವಿದರು.
ವಿವಿಧ ದೇಗುಲಗಳಲ್ಲಿ ಆಯುಧ ಪೂಜೆಯ ಸಂಭ್ರಮ ಕಂಡುಬಂದಿತು. ಹಬ್ಬದ ಹಿನ್ನಲೆಯಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ತಮ್ಮ ವಾಹನಗಳನ್ನು ದೇಗುಲಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿದರು.