ಚಿಕ್ಕಮಗಳೂರು: ಅಯೋಧ್ಯೆಯ ಬಾಲರಾಮನಿಗೆ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಅರ್ಪಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಮಾಡಿಸಿ ಅದನ್ನು ಶೃಂಗೇರಿ ಶ್ರೀಗಳಿಂದ ಪೂಜಿಸಿ ಅಯೋಧ್ಯೆ ಬಾಲರಾಮನಿಗೆ ಸಮರ್ಪಿಸಿದ್ದಾರೆ.
ಅತ್ಯದ್ಭುತವಾಗಿರುವ ಈ ಬೆಳ್ಳಿಯ ಬಿಲ್ಲು-ಬಾಣವನ್ನು ಆಂಧ್ರ ಮೂಲದ ರಾಮನ ಭಕ್ತರಾಗಿರುವ ಚಲ್ಲಾ ಶ್ರೀನಿವಾಸ್ ಎಂಬುವವರು ಮಾಡಿಸಿದ್ದು, ಅದನ್ನು ಶೃಂಗೇರಿ ಮಠಕ್ಕೆ ತಂದು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರಿಂದ ಪೂಜೆ ಮಾಡಿಸಿದ್ದಾರೆ. ಶೃಂಗೇರಿ ಮಠದ ಕಿರಿಯ ಗುರುಗಳಾದ ವಿಧುಶೇಖರ ಶ್ರೀಗಳು ಬೆಳ್ಳಿಯ ಬಿಲ್ಲು-ಬಾಣವನ್ನು ಕೈಯಲ್ಲಿ ಹಿಡಿದು ನೋಡಿದ್ದಾರೆ. ಅತ್ಯಂತ ಸುಂದರವಾದ ಬೆಳ್ಳಿಯ ಬಿಲ್ಲು-ಬಾಣವನ್ನು ಅಯೋಧ್ಯೆಯ ಶ್ರೀ ಬಾಲರಾಮನಿಗೆ ಕೊಡುಗೆಯನ್ನಾಗಿ ನೀಡಲಾಗಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಅಂದು ಶೃಂಗೇರಿಯ ಋತ್ವಿಜರು ಹಾಗೂ ಪುರೋಹಿತರು ಕೂಡ ಅಯೋಧ್ಯೆಯ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಶೃಂಗೇರಿಯ ತಂಗಾ ನದಿ ಹಾಗೂ ಭದ್ರಾ, ಹೇಮಾವತಿ ನದಿಯ ಜಲವನ್ನು ರಾಮನ ಅಭಿಷೇಕಕ್ಕೆ ಕೊಂಡೊಯ್ಯಲಾಗಿತ್ತು.