ಡಿಸೆಂಬರ್ 31 ರ ರಾತ್ರಿ ಸಾಮಾನ್ಯವಾಗಿ ಜನ ಬೀಚ್, ರೆಸ್ಟೋರೆಂಟ್, ಪರ್ವತಪ್ರದೇಶಗಳ ರೆಸಾರ್ಟ್, ಹೋಟೇಲ್ ಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸುವ ಈ ದಿನದಂದು ಬೀಚ್, ರೆಸ್ಟೋರೆಂಟ್, ಹೋಟೆಲ್, ರೆಸಾರ್ಟ್ ಗಳು ತುಂಬಿಹೋಗಿರುತ್ತವೆ. ಆದರೆ ಈ ಬಾರಿ 2023 ರ ಡಿಸೆಂಬರ್ 31 ರಂದು ಬೀಚ್, ಗಿರಿಧಾಮಗಳಿಗಿಂತ ಧಾರ್ಮಿಕ ಕ್ಷೇತ್ರವು ಜನರ ಫೇವರಿಟ್ ಸ್ಥಳವಾಗಿತ್ತು.
ಓಯೋ ಸಂಸ್ಥಾಪಕ ಮತ್ತು ಸಿಇಓ ರಿತೇಶ್ ಅಗರ್ವಾಲ್ ಅವರು ಈ ಬಗ್ಗೆ ಡೇಟಾ ಮಾಹಿತಿ ಹಂಚಿಕೊಂಡಿದ್ದು ಈ ಬಾರಿ ಡಿಸೆಂಬರ್ 31 ರಂದು ಓಯೋದಲ್ಲಿ ಜನರು ರೂಂ ಬುಕ್ ಮಾಡಿದ ಸ್ಥಳ ಯಾವುದೋ ಬೀಚ್ ಅಥವಾ ಗಿರಿಧಾಮವಾಗಿಲ್ಲ ಅವರು ಹೆಚ್ಚಾಗಿ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಆಸಕ್ತಿ ತೋರಿದ್ದಾರೆ ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಮತ್ತು ಹೊಸದಾಗಿ ನವೀಕರಿಸಿದ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದು ಇಲ್ಲಿ ಡಿಸೆಂಬರ್ 31 ನ್ನು ಕಳೆಯಲು ಜನ ಹೆಚ್ಚು ಆಸಕ್ತಿ ತೋರಿದ್ದು ಗೊತ್ತಾಗಿದೆ.
“ಅಯೋಧ್ಯೆ ಭಾರತದ ಅತಿದೊಡ್ಡ ಪ್ರವಾಸಿ ಸ್ಥಳವಾಗಲಿದೆ” ಎಂದು ಟ್ವಿಟರ್ ಬಳಕೆದಾರರ ಭವಿಷ್ಯವಾಣಿಯನ್ನ ಸಮ್ಮತಿಸಿದ ರಿತೇಶ್ ಅಗರ್ವಾಲ್, “ಬೆಟ್ಟಗಳಲ್ಲ, ಕಡಲತೀರಗಳೂ ಅಲ್ಲ, ! 80% ಹೆಚ್ಚು ಬಳಕೆದಾರರು ಇಂದು ಅಯೋಧ್ಯೆಯಲ್ಲಿ ತಂಗಲು ಹುಡುಕುತ್ತಿದ್ದಾರೆ ಎಂದಿದ್ದರು.
ಮತ್ತೊಂದು ಟ್ವೀಟ್ ನಲ್ಲಿ, “ಪವಿತ್ರ ಸ್ಥಳಗಳು ಈಗ ಭಾರತದ ನೆಚ್ಚಿನ ತಾಣಗಳಾಗಿವೆ. ಗೋವಾ (50%) ಮತ್ತು ನೈನಿತಾಲ್ (60%) ವಿರುದ್ಧ ಓಯೋ ಅಪ್ಲಿಕೇಶನ್ ಬಳಕೆದಾರರಲ್ಲಿ ಅಯೋಧ್ಯೆ 70% ಜಿಗಿತವನ್ನು ಕಂಡಿದೆ. ಆಧ್ಯಾತ್ಮಿಕ ಪ್ರವಾಸೋದ್ಯಮವು ಮುಂದಿನ 5 ವರ್ಷಗಳಲ್ಲಿ ಪ್ರವಾಸೋದ್ಯಮದ ಅತಿದೊಡ್ಡ ಬೆಳವಣಿಗೆಯ ಭಾಗದಲ್ಲಿ ಒಂದಾಗಿದೆ” ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ಆರು ವಂದೇ ಭಾರತ್ ಮತ್ತು ಎರಡು ಹೊಸ ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಮತ್ತು ಹೊಸದಾಗಿ ನವೀಕರಿಸಿದ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಅಯೋಧ್ಯೆ ನಗರವು ಜನವರಿ 22 ರಂದು ದೇವಾಲಯದ ಉದ್ಘಾಟನೆಗೆ ಸಜ್ಜಾಗಿದ್ದು ಇಲ್ಲಿ ಇನ್ಮುಂದೆ ಆಧ್ಯಾತ್ಮ ಪ್ರವಾಸೋದ್ಯಮದ ಬೆಳವಣಿಗೆಯಾಗುವ ನಿರೀಕ್ಷೆಯಿದೆ.