ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರ ಈಗ ಅಯೋಧ್ಯೆ ಸ್ವಾಮೀಜಿಗಳು ಬೆಂಬಲಕ್ಕೆ ನಿಲ್ಲಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 5 ರಂದು ರ್ಯಾಲಿ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಮಹಾಂತ ಸತ್ಯೇಂದ್ರ ದಾಸ್, ಅಯೋಧ್ಯೆಯ ರಾಮ್ ಕಥಾ ಪಾರ್ಕ್ ನಲ್ಲಿ ಅಯೋಧ್ಯೆಯ ಪ್ರಮುಖರು ಮತ್ತು ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬರುವ ಮುಖಂಡರು ರ್ಯಾಲಿ ನಡೆಸಲಿದ್ದು, ಇದೇ ಸಂದರ್ಭದಲ್ಲಿ ಹಲವು ಲೋಪದೋಷಗಳಿಂದ ಕೂಡಿರುವ ಪೋಕ್ಸೋ ಕಾಯ್ದೆ ವಿರುದ್ಧವೂ ಸಹ ಪ್ರತಿಭಟಿಸುವುದಾಗಿ ಹೇಳಿದ್ದಾರೆ.
ಇದರ ಮಧ್ಯೆ ಪ್ರತಿಭಟನಾ ನಿರತ ಕುಸ್ತಿಪಟುಗಳ ಬೆಂಬಲಕ್ಕೆ ರೈತಪರ ಸಂಘಟನೆಗಳ ಮುಖಂಡರು ನಿಂತಿದ್ದು, ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ವಿಸರ್ಜಿಸಲು ಮುಂದಾಗಿದ್ದ ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಟ್ ಹಾಗೂ ಬಜರಂಗ್ ಪುನಿಯಾ ಅವರ ಮನವೊಲಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗ 5 ದಿನಗಳ ಗಡುವು ವಿಧಿಸಿರುವ ರೈತ ಮುಖಂಡರು ಅಷ್ಟರೊಳಗೆ ಸ್ಪಂದನೆ ಸಿಗದಿದ್ದರೆ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವುದಾಗಿ ತಿಳಿಸಿದ್ದಾರೆ.