ರಾಮಾಯಣವನ್ನು ಆಧರಿಸಿ ರಚಿತವಾದ ಹಿಂದೂ ಧಾರ್ಮಿಕ ಗ್ರಂಥ ರಾಮ್‌ಚರಿತ್‌ಮಾನಸವು ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್.
ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬಿಹಾರ್ ಶಿಕ್ಷಣ ಸಚಿವ ಚಂದ್ರಶೇಖರ್, ಅದೇ ಸಂದರ್ಭದಲ್ಲಿ ಈ ಒಂದು ಹೇಳಿಕೆಯನ್ನ ಕೊಟ್ಟಿದ್ದಾರೆ. ಸಮಾಜದ ಕೆಳವರ್ಗದವರು ಶಿಕ್ಷಣ ಪಡೆದರೆ ವಿಷಕಾರಿಯಾಗುತ್ತಾರೆ ಎಂದು ರಾಮಚರಿತಮಾನಸ ಹೇಳುತ್ತದೆ. ರಾಮಚರಿತ ಮಾನಸ, ಮನುಸ್ಮೃತಿ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿಂತನೆಗಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ತಪಸ್ವಿ ಚಾವಿಯ ಮಹಂತ ಪರಮಹಂಸ ದಾಸ್ ಅವರು, ಚಂದ್ರಶೇಖರ್ ಅವರ ನಾಲಗೆಯನ್ನು ಯಾರೇ ಕತ್ತರಿಸಿ ತಂದರೂ ಅವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಇಂಥ ಸಚಿವರನ್ನು ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ಅಗ್ರಹಿಸಿದ್ದಾರೆ.
ಈ ಹೇಳಿಕೆಗೆ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದೂ ಹೇಳಿದರು.
ಸಚಿವ ಚಂದ್ರಶೇಖರ್ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಜಗದ್ಗುರು ಪರಮಹಂಸ ಆಚಾರ್ಯ ಕೂಡ ಒತ್ತಾಯಿಸಿದ್ದು, ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಚಂದ್ರಶೇಖರ್ ಅವರನ್ನು ಅವರು ಒತ್ತಾಯಿಸಿದ್ದಾರೆ. ರಾಮಚರಿತಮಾನಸವು ಜನರಿಗೆ ಆಪ್ತವಾದ ಮತ್ತು ಮಾನವೀಯತೆಯನ್ನು ಸಾರುವ ಗ್ರಂಥವಾಗಿದೆ ಎಂದು ಅವರು ಹೇಳಿದ್ದಾರೆ.