ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 1ರಿಂದ 15ರವರೆಗೆ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವ್ಯಾಪ್ತಿಯಲ್ಲಿ ಮಂತ್ರಾಕ್ಷತೆ, ನಿವೇದನಾ ಪತ್ರ ನೀಡುವ ಸಂಪರ್ಕ ಅಭಿಯಾನ ಕೈಗೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರಿಷತ್ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ನಾ. ತಿಪ್ಪೇಸ್ವಾಮಿ ರಾಜ್ಯದಲ್ಲಿ 29 ಸಾವಿರಕ್ಕೂ ಹೆಚ್ಚಿನ ಗ್ರಾಮಗಳ ಪ್ರತಿ ಮನೆಗಳಿಗೂ ಮಂತ್ರಾಕ್ಷತೆ ತಲುಪಿಸುವ ಅಭಿಯಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಚಿತ್ರ ಹಾಗೂ ಮಂದಿರ ನಿರ್ಮಾಣದ ಇತಿಹಾಸ ತಿಳಿಸುವ ನಿವೇದನಾ ಪತ್ರ ವಿತರಿಸಲಾಗುವುದು. 1.50 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜ. 22 ರಂದು ದೇವಾಲಯಗಳಲ್ಲಿ ಭಜನೆ, ಸತ್ಸಂಗ, ರಾಮತಾರಕ ಮಂತ್ರ ಜಪಿಸಲು ಮನವಿ ಮಾಡಲಿದ್ದಾರೆ. ದೇವಾಲಯಗಳಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಿ ಭಕ್ತರಿಗೆ ಅಯೋಧ್ಯೆ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.