ಸದ್ಯ ಅಯೋಧ್ಯೆ ರಾಮಮಂದಿರ ಉದ್ಘಾಟನಾ ದಿನಾಂಕ ಹತ್ತಿರವಾಗಿದ್ದು ಎಲ್ಲರೂ ಭಕ್ತಿ ಪರವಶರಾಗ್ತಿದ್ದಾರೆ. ಅಯೋಧ್ಯೆಯ ವೈಭವಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಗಮನ ಸೆಳೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ಜಾಲತಾಣಗಳಲ್ಲಿ ಶ್ರೀರಾಮನ ಭಕ್ತಿಗೀತೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪುಟ್ಟ ಗಾಯಕಿ ಸೂರ್ಯಗಾಯತ್ರಿ ಅವರ ಭಜನೆಯ ವೀಡಿಯೊವನ್ನು ಮೋದಿ ಶೇರ್ ಮಾಡಿದ್ದಾರೆ.
ಸೂರ್ಯಗಾಯತ್ರಿ ಭಗವಾನ್ ರಾಮನ ಸ್ತೋತ್ರವನ್ನು ಅದ್ಭುತವಾಗಿ ಹಾಡಿದ್ದಾರೆ. ಖುದ್ದು ಪ್ರಧಾನಿ ಇದನ್ನು ಕೇಳಿ ಮಂತ್ರಮುಗ್ಧರಾಗಿದ್ದಾರೆ. ಸೂರ್ಯಗಾಯತ್ರಿ ಅವರ ಈ ಸ್ತುತಿ ಎಲ್ಲರಲ್ಲೂ ಭಕ್ತಿಯನ್ನು ತುಂಬಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೂರ್ಯಗಾಯತ್ರಿ ಕೇರಳದ ವಡಕರ ಬಳಿಯ ಪುರಮೇರಿ ಗ್ರಾಮದ ನಿವಾಸಿ. ಶ್ರೀಮಂತ ಕಂಠಸಿರಿ ಹೊಂದಿದ್ದ ಸೂರ್ಯಗಾಯತ್ರಿ ಚಿಕ್ಕಂದಿನಿಂದಲೇ ಹಾಡಲು ಆರಂಭಿಸಿದ್ದರು. 10 ವರ್ಷದವಳಿದ್ದಾಗಲೇ ಆಕೆಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಎಂ.ಎಸ್. ಸುಬ್ಬಲಕ್ಷ್ಮಿ ಅವರಿಂದ ಗಾಯತ್ರಿ ಸಂಗೀತದಲ್ಲಿ ಫೆಲೋಶಿಪ್ ಪಡೆದರು.
ಸೂರ್ಯಗಾಯತ್ರಿ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಹೆಸರು ಗಳಿಸಿದ್ದಾಳೆ. ಕರ್ನಾಟಕದ ಗಾಯಕ ಕುಲದೀಪ್ ಎಂ.ಪೈ ನಿರ್ಮಿಸಿದ ವಂದೇ ಗುರು ಪರಂಪರಂ ಎಂಬ ಆಧ್ಯಾತ್ಮಿಕ ಸಂಗೀತ ಸರಣಿಯಲ್ಲಿ ಸೂರ್ಯಗಾಯತ್ರಿ ಅನೇಕ ಭಜನೆಗಳನ್ನು ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸೂರ್ಯಗಾಯತ್ರಿ ಬಹಳ ಜನಪ್ರಿಯ. ಅವರು ಯೂಟ್ಯೂಬ್‌ನಲ್ಲಿ 150 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.