ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಮುಂಚಿತವಾಗಿ ನಗರದ ಅಯೋಧ್ಯೆ ರೈಲ್ವೆ ನಿಲ್ದಾಣವನ್ನು “ಅಯೋಧ್ಯಾ ಧಾಮ್” ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ.
ಅಯೋಧ್ಯೆ ಸಂಸದ ಲಲ್ಲು ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಧಾನಮಂತ್ರಿ ಮೋದಿ ಅವರ ಮಾರ್ಗದರ್ಶನದಲ್ಲಿ ಅಯೋಧ್ಯೆ ಜಂಕ್ಷನ್ “ಅಯೋಧ್ಯಾ ಧಾಮ” ಜಂಕ್ಷನ್ ಆಗಿ ಮಾರ್ಪಟ್ಟಿದೆ, ಹೊಸದಾಗಿ ನಿರ್ಮಿಸಲಾದ ಭವ್ಯವಾದ ಅಯೋಧ್ಯೆ ರೈಲು ನಿಲ್ದಾಣದ ಅಯೋಧ್ಯೆ ಜಂಕ್ಷನ್ ಹೆಸರನ್ನು ಸಾರ್ವಜನಿಕರ ನಿರೀಕ್ಷೆಯಂತೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಜನವರಿ 22, 2024 ರಂದು ರಾಮಮಂದಿರದ ಉದ್ಘಾಟನೆಗೆ ಅಯೋಧ್ಯೆಯಲ್ಲಿ ಮಾಡಲಾದ ಸಿದ್ಧತೆಗಳನ್ನು ಪ್ರಧಾನ ಮಂತ್ರಿಯವರು ಮೇಲ್ವಿಚಾರಣೆ ಮಾಡಲಿದ್ದಾರೆ.
ಬೃಹತ್ ರೈಲು ನಿಲ್ದಾಣವು ಲಿಫ್ಟ್ ಗಳು, ಪ್ರವಾಸಿ ಮಾಹಿತಿ ಕೇಂದ್ರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಎಲ್ಲಾ ರೀತಿಯ ವ್ಯಾಪಕ ಸಿದ್ಧತೆಗಳು ಪೂರ್ಣಗೊಂಡಿವೆ.
ನವೀಕರಿಸಿದ ಪ್ಲಾಟ್‌ಫಾರ್ಮ್‌ಗಳು, ಹೊಸ ಸೈನ್ ಬೋರ್ಡ್‌ಗಳು, ಎಸ್ಕಲೇಟರ್‌ಗಳು ಮತ್ತು ಗೋಡೆಗಳ ಮೇಲೆ ಚಿತ್ರಿಸಿದ ಭಗವಾನ್ ರಾಮನ ಭಿತ್ತಿಚಿತ್ರಗಳು ನವೀಕರಣದ ನಂತರ ಅಯೋಧ್ಯೆ ರೈಲು ನಿಲ್ದಾಣದ ವೈಶಿಷ್ಟ್ಯಗಳಾಗಿವೆ.
ಈ ರೈಲು ನಿಲ್ದಾಣವು ಎಷ್ಟು ಆಧುನಿಕವಾಗಿದೆಯೋ ಅಷ್ಟೇ ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಹೊರಗಿನಿಂದ ಭವ್ಯವಾದ ದೇವಾಲಯದಂತೆ ನಿರ್ಮಿಸಲ್ಪಟ್ಟಿದೆ ಮತ್ತು ಒಳಗಿನಿಂದ ಅಷ್ಟೇ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.