ಬೆಂಗಳೂರು: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ರಾಮ ಮಂದಿರ ದರ್ಶನ ಅಭಿಯಾನ ಅಂಗವಾಗಿ ಜನವರಿ 31ರಂದು ಬೆಂಗಳೂರಿನಿಂದ ಮೊದಲ ರೈಲು ಹೊರಡಲಿದೆ.
ಬೆಂಗಳೂರಿನಿಂದ 1,500 ಜನರ ಹೊತ್ತು ರೈಲು ಸಾಗಲಿದ್ದು, ಆರು ದಿನಗಳ ಪ್ರವಾಸಕ್ಕೆ ಒಬ್ಬರಿಗೆ 3,000 ರೂ. ವೆಚ್ಚವಾಗಲಿದೆ. ಟಿಕೆಟ್, ವಸತಿ ವೆಚ್ಚ ಎಲ್ಲಾ ಪ್ರಯಾಣಿಕರೇ ಭರಿಸಬೇಕು. ಪ್ರಯಾಣಕ್ಕೆ ಬಿಜೆಪಿ ಅನುಕೂಲ ಕಲ್ಪಿಸುತ್ತದೆ.
ಬುಧವಾರ ಸಂಜೆ 1500 ಮಂದಿ ತೆರಳುವ ರೈಲನ್ನು ನಿಗದಿತ ಮೊತ್ತ ಪಾವತಿಸಿ ಬುಕ್ ಮಾಡಲಾಗಿದೆ ಎಂದು ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ರಾಮ ಮಂದಿರ ದರ್ಶನ ಮಾಡಿಸಲು ರಾಜ್ಯ ಬಿಜೆಪಿಯಿಂದ ಅಭಿಯಾನ ಕೈಗೊಳ್ಳಲಾಗಿದೆ. ಸುಮಾರು 35 ಸಾವಿರ ಕಾರ್ಯಕರ್ತರು ಜನವರಿ 31 ರಿಂದ ಮಾರ್ಚ್ 22 ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಆರು ದಿನಗಳ ಪ್ರವಾಸಕ್ಕೆ ಪ್ರತಿಯೊಬ್ಬರಿಗೆ ಊಟ, ವಸತಿ ಸಹಿತ 3000 ರೂ. ವೆಚ್ಚವಾಗಲಿದ್ದು, ಕಾರ್ಯಕರ್ತರು ಅದನ್ನು ಭರಿಸಲು ಸೂಚನೆ ನೀಡಲಾಗಿದೆ.