ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಮುಟ್ಟಿನ ಶುಚಿತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಶುಚಿ ಕಾರ್ಯಕ್ರಮ ರೂಪಿಸಲಾಗಿದ್ದು, ಅದರಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.
40 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲಾ/ಕಾಲೇಜುಗಳ 10 ರಿಂದ 18 ವಯೋಮಾನದ 19.30ಲಕ್ಷ ವಿದ್ಯಾರ್ಥಿನಿಯರಿಗೆ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಪ್ಯಾಡ್ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಶುಚಿ ಕಾರ್ಯಕ್ರಮದಡಿ ಹದಿಹರೆಯದವರಲ್ಲಿ ಋತುಸ್ರಾವದ ಶುಚಿತ್ವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹದಿಹರೆಯದವರಿಗೆ ಸ್ಯಾನಿಟರಿ ನ್ಯಾಪಕಿನ್ ಬಳಕೆ ಹಾಗೂ ಉಪಯೋಗಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಸಮುದಾಯ ಮತ್ತು ವಿಶೇಷವಾಗಿ ಹದಿಹರೆಯದವರಲ್ಲಿ ಋತುಸ್ರಾವ ನೈರ್ಮಲ್ಯದ ಕುರಿತು ದೃಷ್ಟಿಕೋನ ಬದಲಾಯಿಸಲಾಗುತ್ತಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದರ ಮುಖಾಂತರ ಬಳಕೆಯನ್ನು ಪ್ರೋತ್ಸಾಹಿಸುವುದು ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.