ಮನುಷ್ಯನಿಗೆ ಬಿಳಿ ಬಣ್ಣ ಎಂದರೆ ಅದೇನೋ ವ್ಯಾಮೋಹ. ಈ ವ್ಯಾಮೋಹ ಆಹಾರ ಪದಾರ್ಥದಲ್ಲೂ ಹೊರತಾಗಿಲ್ಲ. ನಾವು ಉಪಯೋಗಿಸುವ ಎಷ್ಟೋ ಆಹಾರ ಪದಾರ್ಥಗಳು ಇಂದು ಕಲಬೆರಕೆ ಆಗಿರುವುದು ನಮ್ಮ ಗಮನಕ್ಕೆ ಬಂದಿದ್ದರೂ ಅನಿವಾರ್ಯವಾಗಿ ಇದನ್ನು ಸೇವಿಸುತ್ತಿದ್ದೇವೆ. ಪ್ರತಿನಿತ್ಯ ನಾವು ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ಸೇವಿಸದೆ ಬಿಡುವುದೇ ಒಳ್ಳೆಯದು. ಹೀಗೆಂದು ಸ್ವತಃ ವೈದ್ಯ ಲೋಕವೇ ಹೇಳುತ್ತಿದೆ.
ಸಾಮಾನ್ಯ ಕಲ್ಪನೆಯಂತೆ ವಿಷ ಎಂದರೆ ಕಪ್ಪು ಬಣ್ಣದಲ್ಲಿ ಇರಬಹುದು. ಕಹಿಯಾಗಿ ಇರಬಹುದು ಎಂಬ ಊಹೆ. ಆದರೆ ಬಿಳಿ ಬಣ್ಣದಲ್ಲಿ ಸಿಹಿಯಾಗೂ ಇರಬಹುದಾದ ವಿಷದ ಬಗ್ಗೆ ನಿಮಗೆ ಗೊತ್ತಿದೆಯಾ?
ಅಕ್ಕಿ, ಸಕ್ಕರೆ, ಹಾಲು, ಮೈದಾ ಹಾಗೂ ಉಪ್ಪು ಇವೇ ಆ ಐದು ಬಿಳಿ ವಿಷಗಳು. ಅರೇ ಇವನ್ನು ನಾವು ಪ್ರತಿನಿತ್ಯ ಬಳಸುತ್ತೇವಲ್ಲ ಎಂದು ನಿಮಗನಿಸಬಹುದು. ಅದರಲ್ಲೂ ಅಕ್ಕಿ, ಹಾಲು ಮತ್ತು ಉಪ್ಪನ್ನು ದೈವ ಸಮಾನ ಎಂದು ಭಾವಿಸುತ್ತೇವೆ. ಇದು ವಿಷ ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.
ಅಕ್ಕಿ – ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಕ್ಕಿಗೆ ಪೂಜ್ಯ ಸ್ಥಾನವಿದೆ. ಆದರೆ ಇಂದು ನಾವು ಬಳಸುವ ಅಕ್ಕಿ ಸಂಪೂರ್ಣ ಪಾಲಿಶ್ಮಯ. ಇದರಲ್ಲಿ ಯಾವುದೇ ನಾರಿನಂಶ ಇರುವುದಿಲ್ಲ. ಸತ್ವಹೀನ ಕೇವಲ ಬಿಳಿ ಬಣ್ಣ ಹೊಂದಿರುವ ಅಕ್ಕಿಯನ್ನು ಪ್ರತಿನಿತ್ಯ ಸೇವಿಸುವ ಬದಲು, ಪಾಲಿಶ್ ಮಾಡದ ಕೆಂಪು ಅಕ್ಕಿಯನ್ನು ಸೇವಿಸಬಹುದು.
ಸಕ್ಕರೆ – ಇತ್ತೀಚಿಗೆ ಸಕ್ಕರೆಯ ಬಳಕೆ ಬಹಳಷ್ಟು ಹೆಚ್ಚಾಗಿದೆ. ಹಾಗೆ ಭಾರತ ಶೀಘ್ರದಲ್ಲಿ ಮಧುಮೇಹಿಗಳ ರಾಜಧಾನಿಯೂ ಆಗಬಹುದು ಎಂಬ ಆತಂಕ ಕಾಡುತ್ತಿದೆ. ಅತಿಯಾದ ಸಕ್ಕರೆಯ ಬಳಕೆ ಖಾಯಿಲೆಗೆ ಆಹ್ವಾನ. ಸಕ್ಕರೆಯ ಸಿಹಿಗಿಂತ, ಪರ್ಯಾಯವಾಗಿ ತಾಟಿ ಬೆಲ್ಲ ಅಥವಾ ಕಲ್ಲುಸಕ್ಕರೆಯನ್ನು ಉಪಯೋಗಿಸಬಹುದು.
ಹಾಲು – ಹಸುವನ್ನು ಗೋಮಾತೆ ಎಂದು ಕರೆಯುವ ನಾವು, ಹಾಲು ವಿಷ ಎಂದು ನಂಬಲು ಕಷ್ಟವಾಗಬಹುದು. ಆದರೆ ಈಗ ನಾವು ಸೇವಿಸುವ ಹಾಲು ಬಹುತೇಕ ಜರ್ಸಿ ಹಸುವಿನ ಹಾಲು. ಇದರ ಬದಲು ದೇಸಿ ಗೋವಿನ ಹಾಲನ್ನು ಸೇವಿಸಿದರೆ ಇದು ನಿಜಕ್ಕೂ ಅಮೃತ ಸಮಾನ ಆಗಬಹುದು.
ಮೈದಾ – ಬೇಕರಿ ತಿನಿಸುಗಳ ಮೂಲ ವಸ್ತು ಮೈದಾ. ಇದರಿಂದ ದೇಹಕ್ಕೆ ಯಾವುದೇ ಬಗೆಯ ಪೋಷಣೆ ಸಿಗದೇ ಹೋದರೂ, ನಿಯಮಿತವಾಗಿ ಬೇಕರಿ ತಿನಿಸು ತಿನ್ನುವುದರಿಂದ ಕರುಳಿಗೆ ಹಾನಿ ಉಂಟಾಗಿ ಮಲಬದ್ಧತೆಗೆ ಕಾರಣವಾಗುತ್ತದೆ. ಆದ್ದರಿಂದ ಮೈದಾ ಬಳಕೆ ಆದಷ್ಟು ತಡೆಗಟ್ಟುವುದೇ ಒಳ್ಳೆಯದು.
ಉಪ್ಪು – ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತಿದೆ. ಉಪ್ಪಿಲ್ಲದೆ ಯಾವುದೇ ಆಹಾರ ರುಚಿಸುವುದಿಲ್ಲ. ಇಂಥ ಉಪ್ಪು ವಿಷವಾಗಲಿಕ್ಕೂ ಸಾಧ್ಯವಿದೆ. ಇಂದು ಮಾರುಕಟ್ಟೆಯ ಸ್ಪರ್ಧೆಯಲ್ಲಿ ಉಪ್ಪು ಸಹ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಅಂಟಿಲ್ಲದ, ಶುಭ್ರ ಉಪ್ಪು ಎಂಬ ಜಾಹೀರಾತು ಎಲ್ಲರನ್ನೂ ಸೆಳೆಯುತ್ತಿದೆ. ಅತಿಯಾದ ಸಂಸ್ಕರಣೆಗೆ ಒಳಪಟ್ಟ ಉಪ್ಪು ಸಹ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಲ್ಲದು. ಆದ್ದರಿಂದ ಬಿಳಿ ಉಪ್ಪಿನ ಬದಲಾಗಿ ಸಾಮಾನ್ಯ ಕಲ್ಲುಪ್ಪು ಬಳಸುವುದು ಜಾಣತನ.