ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿದೆ.
ಇದೀಗ ಇದೇ ವಿಚಾರವನ್ನು ಮೀಮ್ ಆಗಿ ಬಳಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸ್ ತನ್ನ ತುರ್ತು ಸಹಾಯವಾಣಿ 112 ಹಾಗೂ ಸಂಚಾರ ದಟ್ಟಣೆಯನ್ನು ನಿಭಾಯಿಸುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
“ನಮಗೆ ಯಾವ ವಿಚಾರವೂ ವಿರಾಟವೂ ಅಲ್ಲ ಗಂಭೀರವೂ ಅಲ್ಲ. ಯಾವುದೇ ತುರ್ತು ಪರಿಸ್ಥಿತಿಗೆ, 112ಕ್ಕೆ ಡಯಲ್ ಮಾಡಿ,” ಎಂದು ಹಿಂದಿಯಲ್ಲಿ ಉ.ಪ್ರ ಪೊಲೀಸ್ ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದ್ದು, 1.5 ದಶಲಕ್ಷ ವೀಕ್ಷಣೆಗಳನ್ನು ಕಂಡಿದ್ದು, 44,000 ಲೈಕ್‌ಗಳನ್ನು ಪಡೆದುಕೊಂಡಿದೆ.
ಇದೇ ಸಂದರ್ಭದಲ್ಲಿ ಮತ್ತೊಂದು ಟ್ವೀಟ್ ಮಾಡಿರುವ ಉ.ಪ್ರ ಪೊಲೀಸ್, “ವಾದಗಳಿಗೆ ಇಳಿಯುವುದನ್ನು ತಪ್ಪಿಸಿ, ನಮಗೆ ಕರೆ ಮಾಡುವುನ್ನು ಅಲ್ಲ. ಯಾವುದೇ ತುರ್ತು ಇದ್ದಲ್ಲಿ 112ಕ್ಕೆ ಡಯಲ್ ಮಾಡಿ,” ಎಂದು ಜನರಲ್ಲಿ ಮನವಿ ಮಾಡಿಕೊಂಡಿದೆ.
ಸಾಮಾಜಿಕ ಜಾಲತಾಣದ ಯುಗದಲ್ಲಿ ಇಂದಿನ ಕಾಲಮಾನದ ಜನತೆಯ ಟ್ರಂಡೀ ಭಾಷೆಯಲ್ಲೇ ಸಾರ್ವಜನಿಕ ಕಳಕಳಿಯ ಪೋಸ್ಟ್‌ಗಳನ್ನು ಪೊಲೀಸ್ ಇಲಾಖೆಗಳು ಹಾಕುವ ಮೂಲಕ ಸುದ್ದಿಯಲ್ಲಿವೆ.