ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 ಮೀಟರ್ ಏರ್ ರೈಫಲ್ನಲ್ಲಿ ಕಂಚಿನ ಪದಕ ಸಂಪಾದಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಅವನಿ ಈ ಹಿಂದೆ 10 ಮೀಟರ್ ಏರ್ ರೈಫಲ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಸ್ಟಾಡಿಂಗ್ ಪೊಸಿಷನ್ನಲ್ಲಿ 15 ಶಾಟ್ಗಳನ್ನು ಹೊಡೆದ ಅವನಿ ಒಟ್ಟು 149.5 ಅಂಕಗಳನ್ನು ಸಂಪಾದಿಸುವ ಮೂಲಕ 4ನೇ ಸ್ಥಾನವನ್ನು ಪಡೆದಿದ್ದರು. ಪ್ರೋನ್ ಪೊಸಿಷನ್ನಲ್ಲಿ 50.8,50.3 ಹಾಗೂ 48.4 ಸೇರಿಸಿ ಒಟ್ಟು 149.5 ಅಂಕಗಳನ್ನು ಸಂಪಾದಿಸಿದರು. ಇದಾದ ಬಳಿಕ ಅವರು 6ನೇ ಸ್ಥಾನಕ್ಕೆ ಕುಸಿದರು.
ಸ್ಟ್ಯಾಂಡಿಂಗ್ ಪೊಸಿಷನ್ನಲ್ಲಿ ಮೊದಲ 2 ಸರಣಿಗಳ ಬಳಿಕ ಅವನಿ 4ನೇ ಸ್ಥಾನಕ್ಕೆ ಏರಿದರು. ಉಕ್ರೇನ್ನ ಇರಿನಾ ಶ್ಚೆಟ್ನಿಕ್ ವಿರುದ್ಧ ಮೂರನೇ ಸ್ಥಾನಕ್ಕಾಗಿ ಲೇಖಾರಾ ಪೈಪೋಟಿಗೆ ಇಳಿದಿದ್ದರು. ಲೇಖಾರ 10.5 ಶಾಟ್ ಹೊಡೆದರೆ ಇರಿನಾ 9.9 ಶಾಟ್ ಹೊಡೆಯಲಷ್ಟೇ ಶಕ್ತರಾದರು. ಈ ಮೂಲಕ ಕಂಚಿನ ಪದಕ ಅವನಿಯ ಪಾಲಾಗಿದೆ.
ಬೆಳ್ಳಿ ಪದಕಕ್ಕೆ ಚೀನಾದ ಝಾಂಗ್ ಎಂಬವರಿಗೆ ಲೇಖಾರ ಪೈಪೋಟಿ ನೀಡಿದ್ದರು. ಲೇಖಾರಾ 10.2 ಶಾಟ್ ಹೊಡೆದರೆ ಚೀನಾದ ಆಟಗಾರ್ತಿ 10.3 ಶಾಟ್ ಹೊಡೆಯುವ ಮೂಲಕ ಲೇಖಾರಾರನ್ನು ಹಿಂದಿಕ್ಕಿದರು.
19 ವರ್ಷ ಪ್ರಾಯದ ಜೈಪುರದ ಈ ಆಟಗಾರ್ತಿ ಪ್ಯಾರಾಲಿಂಪಿಕ್ನಲ್ಲಿ ಭರ್ಜರಿ ಸಾಧನೆಗೈದಿದ್ದಾರೆ. ಅಂದಹಾಗೆ ಟೋಕಿಯೋ ಗೇಮ್ನಲ್ಲಿ ಅವನಿ ಇನ್ನೂ ಒಂದು ಆಟದಲ್ಲಿ ಪ್ರದರ್ಶನ ನೀಡಬೇಕಿದೆ. ಈ ಸ್ಪರ್ಧೆಯಲ್ಲೂ ಅವನಿ ಪದಕ ಸಂಪಾದಿಸುವಲ್ಲಿ ಯಶಸ್ವಿಯಾದಲ್ಲಿ ಒಂದೇ ಪ್ಯಾರಾಲಿಂಪಿಕ್ನಲ್ಲಿ ಮೂರು ಪದಕಗಳನ್ನು ಸಂಪಾದಿಸಿದ ಭಾರತದ ಮೊದಲ ವನಿತೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.