
ಥಾಣೆ: ಮುಂಬೈ ಸಮೀಪದ ಮೀರಾ ರೋಡ್‌ನಲ್ಲಿ ಆನ್ ಲೈನ್ ಮೂಲಕ ಮಾಂಸ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಮೊಬೈಲ್ ಪಾವತಿ ಸೇವೆಗಳ ಮೂಲಕ ಹಣ ಸ್ವೀಕರಿಸಿ ಗ್ರಾಹಕರಿಗೆ ಹೋಟೆಲ್ ಕೊಠಡಿಗಳನ್ನು ಬುಕ್ ಮಾಡಿದ್ದಾರೆ. ಅವರು ಆಟೋರಿಕ್ಷಾದಲ್ಲಿ ಮಹಿಳೆಯರನ್ನು ಕಳುಹಿಸುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆಟೋದಲ್ಲಿ ಮಹಿಳೆಯರನ್ನು ಹೋಟೆಲ್ ಗೆ ಕರೆತಂದಾಗಲೇ ದಾಳಿ ಮಾಡಿದ್ದಾರೆ. ಇಬ್ಬರು ಮಹಿಳೆಯರನ್ನು ಕರೆತಂದ ಆಟೋ ಚಾಲಕನನ್ನು ಬಂಧಿಸಿದ್ದಾರೆ ಎಂದು ಮೀರಾ ಭಯಂದರ್-ವಸಾಯಿ ವಿರಾರ್ ಪೊಲೀಸ್ ಹಿರಿಯ ಇನ್ಸ್ ಪೆಕ್ಟರ್ ಸಮೀರ್ ಅಹಿರಾರಾವ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಅನೈತಿಕ ಸಂಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆಟೋನ್ನು ವಶಪಡಿಸಿಕೊಂಡು ಇಬ್ಬರು ಮಹಿಳೆಯರನ್ನು ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.