ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, ಕಾರ್) 11% ಮತ್ತು ಟ್ರ್ಯಾಕ್ಟರ್‌ಗಳ ಮಾರಾಟವು 10%ಗೆ ಕುಸಿದಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ಸ್ (ಎಫ್‌ಎಡಿಎ) ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದು ಬಂದಿದೆ.
FADA ಅಂಕಿಅಂಶಗಳ ಪ್ರಕಾರ, ಡಿಸೆಂಬರ್‌ನಲ್ಲಿ 2,44,639 ಪ್ರಯಾಣಿಕ ವಾಹನಗಳ ಮಾರಾಟವಾಗಿದ್ದು, ಒಟ್ಟು ಮಾರಾಟ 10.91 ರಷ್ಟು ಕುಸಿದಿದೆ. 2020 ರ ಡಿಸೆಂಬರ್ ನಲ್ಲಿ, ಒಟ್ಟು 2,74,605 ಯುನಿಟ್ ವಾಹನಗಳು ಮಾರಾಟವಾಗಿದ್ದವು.
ದ್ವಿಚಕ್ರವಾಹನಗಳ ಮಾರಾಟದಲ್ಲು ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೆಚ್ಚುತ್ತಿರುವ ಕೊರೋನಾ ಹಾಗೂ ಮೂರನೇ ಅಲೆ ಭೀತಿಯಿಂದ ಜನರು ವಾಹನಗಳ ಮೇಲೆ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ವಿಭಾಗಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಆರೋಗ್ಯಕರ ಬೆಳವಣಿಗೆಯನ್ನು ಮುಂದುವರೆಸಿದೆ ಎಂದು FADA ತಿಳಿಸಿದೆ.
ಈಗ ಭಾರತದಲ್ಲಿ ಒಮಿಕ್ರಾನ್ ಹೆಚ್ಚಳವಾಗ್ತಿರೋದು, ಮೂರನೇ ಅಲೆಯ ಭಯವಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಚಲನೆಯ ನಿರ್ಬಂಧಗಳನ್ನು ಹಾಕಲು ಪ್ರಾರಂಭಿಸುತ್ತಿವೆ, ಇದು ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.
ಆದರೆ ಇದರ ನಡುವೆಯು ತ್ರಿಚಕ್ರ ವಾಹನ ಮತ್ತು ವಾಣಿಜ್ಯ ವಾಹನಗಳ ಮಾರಾಟವು ಕ್ರಮವಾಗಿ ಶೇ.59 ಮತ್ತು ಶೇ.14ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ ತಿಂಗಳನ್ನು ಸಾಮಾನ್ಯವಾಗಿ ಹೆಚ್ಚಿನ ಮಾರಾಟದ ತಿಂಗಳು ಎಂದು ಕರೆಯಲಾಗುತ್ತದೆ. ಒಳ್ಳೆ ರಿಯಾಯಿತಿಯ ಜೊತೆಗೆ ಹೊಸ ವರ್ಷಕ್ಕೆ ಜನರು ಹೊಸ ಪರ್ಚೇಸ್ ಮಾಡ್ತಾರೆ ಅನ್ನೋ ನಂಬಿಕೆಯಿದೆ. ಆದರೆ ಈ ವರ್ಷ ಯಾವುದು ಅಂದುಕೊಂಡಂತೆ ಆಗಿಲ್ಲ ಎಂದು FADA ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.