ಒಂದಿಲ್ಲೊಂದು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಶ್ರೀಸಾಮಾನ್ಯನಿಗೆ ಇದೀಗ ಆಟೋ ದರ ಏರಿಕೆಯ ಬಿಸಿಯೂ ತಟ್ಟುವಂತೆ ಕಾಣ್ತಿದೆ. ಆಟೋ ಚಾಲಕರ ಮನವಿಗೆ ಮಣಿದಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸಾರಿಗೆ ಇಲಾಖೆ ಆಟೋ ದರ ಏರಿಕೆಗೆ ಮನಸ್ಸು ಮಾಡಿದೆ ಎನ್ನಲಾಗಿದೆ.
ಆಟೋ ದರ ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘ ಸಾಕಷ್ಟು ಬಾರಿ ಮನವಿ ಸಲ್ಲಿಕೆ ಮಾಡಿತ್ತಾದರೂ ಜಿಲ್ಲಾಧಿಕಾರಿ ಹಾಗೂ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಸದ್ಯ ಜಿಲ್ಲಾಧಿಕಾರಿಗಳ ಜೊತೆ ಆಟೋ ಯೂನಿಯನ್ ನಡೆಸಿದ ಸಭೆಯಲ್ಲಿ ದರ ಏರಿಕೆಗೆ ಡಿಸಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಇಂದು ಅಥವಾ ನಾಳೆ ಅಧಿಕೃತ ಆದೇಶ ಹೊರಬರಲಿದೆ ಎನ್ನಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಒಂದು ಕಿಲೋಮೀಟರ್ಗೆ 13 ರೂಪಾಯಿ ಹಾಗೂ ಕನಿಷ್ಟ ಆಟೋ ದರ 25 ರೂಪಾಯಿ ನಿಗದಿಯಾಗಿದೆ. ಆದರೆ ಆಟೋ ಚಾಲಕರ ಸಂಘಟನೆಯು ಪ್ರತೀ ಕಿಲೋಮೀಟರ್ಗೆ 15 ರಿಂದ 16 ರೂಪಾಯಿ ಮಾಡುವಂತೆ ಹಾಗೂ ಕನಿಷ್ಟ ದರವನ್ನು 25 ರಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಪಟ್ಟು ಹಿಡಿದಿದ್ದವು.
ಸಧ್ಯ ಬೆಲೆ ಏರಿಕೆಗೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದು ದರ ಎಷ್ಟು ಏರಿಕೆ ಮಾಡಬೇಕು ಅನ್ನೋದನ್ನು ಇನ್ನೂ ನಿಗದಿ ಮಾಡಿಲ್ಲ ಎನ್ನಲಾಗಿದೆ. 2013 ಕ್ಕೂ ಕೊನೆಯ ಬಾರಿಗೆ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.