ಮಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಸಮೀಪ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಮಾಹಿತಿ ಗೊತ್ತಾಗಿದೆ.
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿದ್ದು, ಪೊಲೀಸರ ಬಳಿ ಪ್ರಯಾಣಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದ ಪ್ರಯಾಣಿಕ ನಂತರ ಅಣ್ಣ ಬಾಬುರಾವ್ ಅವರಿಗೆ ಕರೆ ಮಾಡಿ ಎಂದು ನಂಬರ್ ನೀಡಿದ್ದಾನೆ. ಆ ನಂಬರ್ ಗೆ ಕರೆ ಮಾಡಿದಾಗ ಆತ ಸಂಬಂಧಿಕನೇ ಅಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಆತ ನನ್ನ ರೂಮ್ ನಲ್ಲಿದ್ದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದ. ಆತನ ಬಗ್ಗೆ ಮತ್ತೇನು ಗೊತ್ತಿಲ್ಲ ಎಂದು ವ್ಯಕ್ತಿ ಹೇಳಿದ್ದಾನೆ ಎನ್ನಲಾಗಿದೆ.
ನಿಗೂಢ ಸ್ಫೋಟಗೊಂಡ ಆಟೋದಲ್ಲಿ ಪರಿಶೀಲನೆ ವೇಳೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಆಟೋದಲ್ಲಿ ಎರಡು ಬ್ಯಾಟರಿ ನಟ್ಟು, ಬೋಲ್ಟ್, ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿವೆ. ಲಘು ತೀವ್ರತೆಯ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ.
ಎಫ್ಎಸ್ಎಲ್ ತಂಡ ವಶಕ್ಕೆ ಪಡೆದುಕೊಂಡ ವಸ್ತುಗಳನ್ನು ಪರೀಕ್ಷೆಗೆ ಒಳಪಡಿಸಿದೆ.
ಆಟೋದಲ್ಲಿದ್ದ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಾಗಿದೆ. ಗಾಯಾಳು ಕಾರ್ಮಿಕ ಉತ್ತರ ಪ್ರದೇಶದ ನಿವಾಸಿಯಾಗಿರುವ ಶಂಕೆ ಇದೆ. ಪ್ರೇಮ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನ ಬಾಕ್ಸ್ ಮತ್ತು ಬ್ಯಾಗ್ ನಿಂದಲೇ ಸ್ಪೋಟ ಸಂಭವಿಸಿರುವ ಸಾಧ್ಯತೆ ಇದೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಿನ್ನೆ ಆಟೋದಲ್ಲಿ ಲಘು ತೀವ್ರತೆಯ ಸ್ಪೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳ ಮಾಹಿತಿ ಸಿಕ್ಕಿದೆ. ಪ್ರೇಮ ರಾಜ್ ಎಂಬಾತ ಸ್ಪೋಟಕ ವಸ್ತುಗಳನ್ನು ತುಂಬಿದ್ದ ಕುಕ್ಕರ್ ಸಾಗಿಸುತ್ತಿದ್ದ ಎನ್ನಲಾಗಿದೆ.
ಘಟನೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿರುವ ಡಿಜಿಪಿ ಪ್ರವೀಣ್ ಸೂದ್ ಅವರು, ಸ್ಫೋಟಕವು ಆಕಸ್ಮಿಕವಲ್ಲ ಎಂಬುದು ದೃಢಪಟ್ಟಿದೆ. ಆದರೆ, ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಭಯೋತ್ಪಾದನೆಯ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.