ಸರ್ಕಾರ ನಿಗದಿಪಡಿಸಿರುವ ಶೇಕಡ 10 ಕಮಿಷನ್ ದರವನ್ನು ಶೇ.25 ಕ್ಕೆ ಹೆಚ್ಚಳ ಮಾಡದಿದ್ದರೆ ಅನಿವಾರ್ಯವಾಗಿ ತಾನು ಬೆಂಗಳೂರಿನಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಉಬರ್ ಹೇಳಿದೆ.
ಶೇಕಡ 10 ಕಮಿಷನ್ ದರದಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಾಗುವುದಿಲ್ಲ ಎಂದು ಉಬರ್ ಇಂಡಿಯಾದ ಮುಖ್ಯಸ್ಥ ನಿತೀಶ್ ಭೂಷಣ್ ತಿಳಿಸಿದ್ದು, ಹೀಗಾಗಿ ಆಟೋ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ. ಹಾಗೆಂದು ಇದೇನು ಒತ್ತಡ ತಂತ್ರವಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಸರ್ಕಾರ ಕನಿಷ್ಠ ದರವನ್ನು ಮೂವತ್ತು ರೂಪಾಯಿಗಳಿಗೆ ನಿಗದಿಪಡಿಸಿದ್ದರು ಸಹ ಉಬರ್ ಹಾಗೂ ಓಲಾ ಕಂಪನಿಗಳು ಆಟೋ ಸೇವೆಗೆ ನೂರು ರೂಪಾಯಿ ಪೀಕುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಯಾಣಿಕರಿಂದ ಈ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಉಭಯ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಬಳಿಕ ಇದು ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.